ಬೀದರ್: ಜೆಡಿಎಸ್ ಪಕ್ಷದ ಯುವ ಜನತಾದಳದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿರವರು ಸೆಪ್ಟೆಂಬರ್ 16ರಂದು ಮಂಗಳವಾರ ಬೀದರ್ ಜಿಲ್ಲೆಗೆ ಆಗಮಿಸುತ್ತಿದ್ದಾರೆಂದು ಜೆಡಿಎಸ್ ಬೀದರ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲಪೂರ್ ರವರು ತಿಳಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿರವರ ಪ್ರವಾಸದ ಕುರಿತು ಭಾನುವಾರ ಮಾಹಿತಿ ನೀಡಿರುವ ಅವರು, ‘ಬೀದರ್ ಜಿಲ್ಲೆಯಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ಮತ್ತು ನೊಂದ ಸಂತ್ರಸ್ಥರ ಭೇಟಿ ಮತ್ತು ಸಾಂತ್ವನ ಹಾಗೂ ಸರ್ಕಾರ ಕೈಗೊಂಡಿರುವ ನೆರೆ ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ’ ನಡೆಸಲು ನಿಖಿಲ್ ಕುಮಾರಸ್ವಾಮಿರವರು ಜಿಲ್ಲೆಗೆ ಆಗಮಿಸುತ್ತಿದ್ದಾರೆ ಎಂದಿದ್ದಾರೆ.
ನಿಖಿಲ್ ಕುಮಾರಸ್ವಾಮಿರವರೊಂದಿಗೆ ಮಾಜಿ ಸಚಿವರು ಜಿಲ್ಲೆಯ ಪ್ರಮುಖರಾದ ಬಂಡೆಪ್ಪ ಖಾಶೆಂಪುರ್, ಮುಖಂಡರಾದ ಮಲ್ಲಿಕಾರ್ಜುನ ಖೂಬಾ, ಸೂರ್ಯಕಾಂತ್ ನಾಗಮಾರಪಳ್ಳಿರವರು ಸೇರಿದಂತೆ ಅನೇಕರಿರುತ್ತಾರೆ.
ಕಲಬುರಗಿಯಿಂದ ಬೀದರ್ ಜಿಲ್ಲೆಗೆ ಮಂಗಳವಾರ ಬೆಳಗ್ಗೆ 10:00 ಗಂಟೆಗೆ ನಿಖಿಲ್ ಕುಮಾರಸ್ವಾಮಿರವರು ಆಗಮಿಸುತ್ತಾರೆ.
ಬಳಿಕ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಭಾರಿ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆ ಮಾಡುತ್ತಾ, ನೊಂದ ಸಂತ್ರಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳುತ್ತಾರೆ. ಇದೇ ವೇಳೆ ಸರ್ಕಾರ ಕೈಗೊಂಡಿರುವ ನೆರೆ ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ಬೆಳೆ ಹಾನಿ ವೀಕ್ಷಣೆ ಬಳಿಕ ಪತ್ರಿಕಾಗೋಷ್ಠಿ ನಡೆಸುತ್ತಾರೆ. ಹಾಗಾಗಿ ಜೆಡಿಎಸ್ ಪಕ್ಷದ ಚುನಾಯಿತ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ರಮೇಶ್ ಪಾಟೀಲ್ ಸೋಲಪೂರ್ ರವರು ಮನವಿ ಮಾಡಿದ್ದಾರೆ.