ವಿಜಯಸಾಕ್ಷಿ ಸುದ್ದಿ, ಡಂಬಳ : ತಾಳ್ಮೆ, ಶ್ರದ್ಧೆ, ಭಕ್ತಿಯ ಮಾರ್ಗದ ಮೂಲಕ ಸಮಾ ಸಮಾಜ ಕಟ್ಟಲು ಭಕ್ತರ ಮಧ್ಯೆ ಇದ್ದು ಭಕ್ತರ ಹೃದಯದಲ್ಲಿ ನೆಲೆಸಿರುವ ನಿರಂಜನ ಜ್ಯೋತಿ ಮೃತ್ಯುಂಜಯ ಮಹಾಸ್ವಾಮಿಗಳು ಹಾಕಿಕೊಟ್ಟ ವಿಚಾರಗಳು ಸದಾ ಕಾಲ ಇರುತ್ತವೆ ಎಂದು ಮುಂಡರಗಿಯ ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ಹೇಳಿದರು.
ಡಂಬಳ ಹೋಬಳಿಯ ಹಿರೇವಡ್ಡಟ್ಟಿ ಗ್ರಾಮದಲ್ಲಿ ನಿರಂಜನ ಜ್ಯೋತಿ ಮೃತ್ಯುಂಜಯ ಮಹಾಸ್ವಾಮಿಗಳವರ ಜಯಂತ್ಯುತ್ಸವ ಹಾಗೂ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಣಕವಾಡ ಹಿರೇವಡ್ಡಟ್ಟಿ ಮೃತ್ಯುಂಜಯ ಶ್ರೀಗಳು ಮಾತನಾಡಿ, ಭಕ್ತರು ಭಸ್ಮ ಧಾರಣೆ ಮತ್ತು ರುದ್ರಾಕ್ಷಿ ಧಾರಣೆ ಮಾಡುವುದರ ಮೂಲಕ ನಮ್ಮ ಸಂಸ್ಕಾರವನ್ನು ಉಳಿಸಲು ಆದ್ಯತೆ ನೀಡಿ. ನಿರಂಜನ ಜ್ಯೋತಿ ಮೃತ್ಯುಂಜಯ ಶ್ರೀಗಳು ಹಾಕಿಕೊಟ್ಟ ನ್ಯಾಯ, ನೀತಿ, ಸತ್ಯದ ವಿಚಾರಗಳಲ್ಲಿ ನಡೆದರೆ ಉತ್ತಮ ಬದುಕು ನಿಮ್ಮದಾಗಲಿದೆ ಎಂದು ಹೇಳಿದರು.
ಹಿರೇವಡ್ಡಟ್ಟಿಯ ಶಿವಾಚಾರ್ಯ ಶ್ರೀಗಳು ಮಾತನಾಡಿ, ಜಗತ್ತಿನಲ್ಲಿ ದ್ವೇಷದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಉತ್ತಮ ಮನೋಭಾವನೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ. ಪ್ರತಿಯೊಬ್ಬರೂ ಸಾತ್ವಿಕ, ಸತ್ಯ, ನ್ಯಾಯ, ನಿಷ್ಠೆ ಕಾಯಕದ ಬದುಕು ನಿರ್ಮಿಸಿಕೊಳ್ಳುವಂತಾಗಲಿ ಎಂದು ಹೇಳಿದರು.
ಶಿವಶರಣೆ ಡಾ. ನೀಲಮ್ಮ ತಾಯಿ ಮಾತನಾಡಿ, ಭಕ್ತರನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯಲು 17ನೇ ಶತಮಾನದಲ್ಲಿ ಮೃತ್ಯುಂಜಯ ಶ್ರೀಗಳು ಹಾಕಿಕೊಟ್ಟ ತಪಸ್ಸಿನ ಶಕ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಅಭಿನವ ಮೃತ್ಯುಂಜಯ ಶ್ರೀಗಳು ಸಮಾಜ ಕಟ್ಟಲು ನಿರಂತರವಾಗಿ ಭಕ್ತರ ಒಡನಾಡಿಯಾಗಿ, ಶಿಕ್ಷಣ ಎಂಬ ಶಕ್ತಿಯನ್ನು ಕಟ್ಟುವುದರ ಮೂಲಕ ಹಿರೇವಡ್ಡಟ್ಟಿ ಗ್ರಾಮದಲ್ಲಿ ಪ್ರವಚನ ಹಮ್ಮಿಕೊಂಡು ಭಕ್ತರನ್ನು ಸರಿದಾರಿಯಲ್ಲಿ ನಡೆಯಬೇಕೆಂಬ ಅವರ ಹಂಬಲ ಸಾಕಾರಗೊಳ್ಳಲಿ ಎಂದು ಹೇಳಿದರು.
ವೈದ್ಯರಾದ ಡಾ.ಉಮೇಶ ಪುರದ ಮಾತನಾಡಿ, ನಡೆ-ನುಡಿ-ಭಾವದ ಜೊತೆಗೆ ಸಮ ಸಮಾಜ ನಿರ್ಮಾಣ ಆಗಬೇಕು ಎನ್ನುವ ಹಂಬಲವನ್ನು ಹೊಂದಿದ್ದ ಮೃತ್ಯುಂಜಯ ಶ್ರೀಗಳ ಕಾರ್ಯ ಸದಾ ಕಾಲ ಇರುವಂತದ್ದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯ ನಾಗರಿಕರನ್ನು ಸನ್ಮಾಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.