ವಿಜಯಸಾಕ್ಷಿ ಸುದ್ದಿ, ಗದಗ: ಬಿಹಾರ ಸರ್ಕಾರ ಆಯೋಜಿಸಿದ್ದ ಆಯುಷ್ ಕಾರ್ಯಕ್ರಮದ ವೇದಿಕೆಯಲ್ಲಿ ಹಿಜಾಬ್ ಧರಿಸಿದ ಮಹಿಳಾ ವೈದ್ಯರೊಂದಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಸಭ್ಯವಾಗಿ ವರ್ತಿಸಿರುವುದನ್ನು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಖಂಡಿಸುತ್ತದೆ ಎಂದು ರಾಜ್ಯಾಧ್ಯಕ್ಷ ಮಹ್ಮದಶಫಿ ನಾಗರಕಟ್ಟಿ ಹೇಳಿದರು.
ಮಹಾಸಭಾದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಇದು ಭಾರತೀಯ ಸಂಸ್ಕೃತಿಯ ಲಕ್ಷಣವಲ್ಲ. ಹೀಗೆ ಒಬ್ಬ ಮಹಿಳೆಯ ಒಪ್ಪಿಗೆ ಇಲ್ಲದೆ ಆಕೆಯನ್ನು ಸ್ಪರ್ಶಿಸುವುದು ಮಹಿಳೆಯರಿಗೆ ಮಾಡುವ ಅವಮಾನವಾಗಿದೆ. ನಿತೀಶ್ ಕುಮಾರರು ಸಮಾಜವಾದಿ ತತ್ವದ ಹಿನ್ನೆಲೆಯಿಂದ ಬಂದವರು. ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ರಾಮಕೃಷ್ಣ ಹೆಗಡೆ, ಯು.ಪಿ. ಸಿಂಗ್, ಚಂದ್ರಶೇಖರ್‌ರಂತಹ ಘಟಾನುಘಟಿಗಳ ನಾಯಕತ್ವದಲ್ಲಿ ಬೆಳೆದು ಬಂದವರು. ಇಂತಹ ವರ್ತನೆ ಅವರ ಘನತೆಗೆ ಶೋಭೆ ತರುವಂತದ್ದಲ್ಲ. ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಳ್ಳಲು ಅವರ ಸಂಪುಟದ ಸಚಿವ ಸಂಜಯ್ ನಿಸಾದ್ ಬಳಸಿದ ಅಸಾಂವಿಧಾನಿಕ ಪದಗಳನ್ನು ಯಾವುದೇ ನಾಗರಿಕ ಸಮಾಜವು ಒಪ್ಪದು. ಅವರು ಸಚಿವ ಸ್ಥಾನಕ್ಕೆ ಯೋಗ್ಯರಲ್ಲ. ಮಹಿಳೆಯರಿಗೆ ಗೌರವ ನೀಡದ ಇವರು ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.



