ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಯುವ ದಾಂಡಿಗ ನಿತೀಶ್ ಕುಮಾರ್ ರೆಡ್ಡಿ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದಾರೆ.
ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿತೀಶ್ ಕುಮಾರ್ ರೆಡ್ಡಿ 171 ಎಸೆತಗಳಲ್ಲಿ ಶತಕ ಪೂರೈಸಿದರು.
ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 474 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಕೇವಲ 3 ರನ್ಗಳಿಸಿ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕೆಎಲ್ ರಾಹುಲ್ 24 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್ ಶತಕದ ಜೊತೆಯಾಟ ಪ್ರದರ್ಶಿಸಿದರು. ಆದರೆ ತಂಡದ ಮೊತ್ತ 153 ರನ್ ಆಗಿದ್ದ ವೇಳೆ ರನ್ ಕದಿಯುವ ಯತ್ನದಲ್ಲಿ ಯಶಸ್ವಿ ಜೈಸ್ವಾಲ್ (82) ರನೌಟ್ ಆಗಿ ಹೊರ ನಡೆದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ (36) ಸಹ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಆಕಾಶ್ ದೀಪ್ (0) ಶೂನ್ಯಕ್ಕೆ ಔಟಾದರೆ, ರಿಷಭ್ ಪಂತ್ 28 ರನ್ಗಳಿಸಲಷ್ಟೇ ಶಕ್ತರಾದರು.
ಈ ಹಂತದಲ್ಲಿ ಕಣಕ್ಕಿಳಿದ ನಿತೀಶ್ ಕುಮಾರ್ ರೆಡ್ಡಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಎಚ್ಚರಿಕೆಯೊಂದಿಗೆ ರನ್ ಗಳಿಸುತ್ತಾ ಸಾಗಿದ ನಿತೀಶ್ 81 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿಯ ಬಳಿಕ ಆಸೀಸ್ ಬೌಲರ್ಗಳನ್ನು ಕಾಡಿದ ಯುವ ದಾಂಡಿಗ ಟೀಮ್ ಇಂಡಿಯಾ ಮೊತ್ತವನ್ನು 300ರ ಗಡಿದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಅಲ್ಲದೆ 150 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಭರ್ಜರಿ ಶತಕ ಸಿಡಿಸಿದರು. ಇನ್ನೂ ಮಗನ ಸೆಂಚುರಿ ಕಂಡು ಮೈದಾನ ಬಳಿ ನಿಂತು ಪಂದ್ಯ ವೀಕ್ಷಿಸುತ್ತಿದ್ದ ಅವರ ತಂದೆ ಮುತ್ಯಾಲ ರೆಡ್ಡಿ ಆನಂದ ಭಾಷ್ಪದೊಂದಿಗೆ ಸಂಭ್ರಮಿಸಿದರು.