HomeIndia Newsಎಸಿ ರೂಂಗಳಲ್ಲಿ ಬೇಡ; ಸೋಮಾರಿತನ ಬಿಟ್ಟು ನೆರೆ ಸಂತ್ರಸ್ತರ ನೆರವಿಗೆ ಬನ್ನಿ: HDK ಆಗ್ರಹ

ಎಸಿ ರೂಂಗಳಲ್ಲಿ ಬೇಡ; ಸೋಮಾರಿತನ ಬಿಟ್ಟು ನೆರೆ ಸಂತ್ರಸ್ತರ ನೆರವಿಗೆ ಬನ್ನಿ: HDK ಆಗ್ರಹ

For Dai;y Updates Join Our whatsapp Group

Spread the love

ನವದೆಹಲಿ: ಬೆಂಗಳೂರಿನಲ್ಲಿ ಎಸಿ ರೂಂಗಳಲ್ಲಿ ಕೂತು ಕಾಲಹರಣ ಮಾಡುವುದಲ್ಲ, ಸೋಮಾರಿತನ ಬಿಟ್ಟು ಮೊದಲು ನೆರೆ ಸಂತ್ರಸ್ತರ ನೆರವಿಗೆ ಬನ್ನಿ. ತಕ್ಷಣವೇ ಕಲ್ಯಾಣ ಕರ್ನಾಟಕ್ಕೆ ನೆರೆ ಪರಿಹಾರ ಪ್ಯಾಕೇಜ್‌ ಘೋಷಣೆ ಮಾಡಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನವದೆಹಲಿಯಲ್ಲಿ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು; ಕಲ್ಯಾಣ ಕರ್ನಾಟಕದಲ್ಲಿ ನೆರೆ ಸಂಕಷ್ಟದಲ್ಲಿ ಜನರಿದ್ದರೆ ರಾಜ್ಯದಲ್ಲಿರುವ ಸರಕಾರ ʼಕುಂಭಕರ್ಣ ನಿದ್ರೆʼಯಲ್ಲಿದೆ ಎಂದು ತರಾಟೆಗೆ ತೆಗೆದುಕೊಂಡರು.

ಮುಖ್ಯಮಂತ್ರಿ ಸೇರಿ ಸಂಪುಟದ 36 ಸಚಿವರಿಗೆ ಇವತ್ತು ಜ್ಞಾನೋದಯವಾಗಿದೆ. ಅಷ್ಟೂ ಸಚಿವರು ಇಲ್ಲಿವರೆಗೆ ಏನು ಮಾಡುತ್ತಿದ್ದರು? ಮಾಧ್ಯಮಗಳು ಮತ್ತು ಪ್ರತಿಪಕ್ಷಗಳಿಂದ ಸರಕಾರದ ವಿರುದ್ಧ ಟೀಕೆಗಳು ಶುರುವಾದ ಮೇಲೆ ಮುಖ್ಯಮಂತ್ರಿಗಳು ನೆರೆಪೀಡಿತ ಜಿಲ್ಲೆಗಳಿಗೆ ತೆರಳಿ ಏರಿಯಲ್‌ ಸರ್ವೇ ಮಾಡಿದ್ದಾರೆ. ಆದರೆ, ನೆರೆ ಪ್ರತಿ ವರ್ಷದ ಸಮಸ್ಯೆ. ಕಳೆದ 3 ತಿಂಗಳಿಂದ ಈ ಸರಕಾರ ಗಾಢ ನಿದ್ರೆಯಲ್ಲಿತ್ತು ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಸಿಎಂ ಹೇಳಿಕೆ ಬಗ್ಗೆ ನಿರಾಶೆ ಆಗಿದೆ:

ಪರಿಹಾರಕ್ಕೆ ಒತ್ತಾಯ ಮಾಡುತ್ತಿರುವ ಪ್ರತಿಪಕ್ಷಗಳ ಬಗ್ಗೆ ಮುಖ್ಯಮಂತ್ರಿ ನೀಡುತ್ತಿರುವ ಉತ್ತರ, ಹೇಳಿಕೆಗಳನ್ನು ನೋಡಿದರೆ ನಿರಾಶೆಯಾಗುತ್ತದೆ. ಪ್ರತಿಪಕ್ಷವನ್ನು ಬೈದರೆ ನೆರೆ ಸಂತ್ರಸ್ತರ ಸಮಸ್ಯೆ ನೀಗುತ್ತದೆಯೇ? ಅವರ ಹೇಳಿಕೆಗಳು ಅವರು ಅಲಂಕರಿಸುವ ಹುದ್ದೆಗೆ ತಕ್ಕುದಾಗಿಲ್ಲ. ಸಂಪುಟದಲ್ಲಿ 36 ಜನ ಮಂತ್ರಿಗಳಿದ್ದಾರೆ.

ಅವರೆಲ್ಲರೂ ಎಲ್ಲಿ ಹೋಗಿದ್ದಾರೆ? ಎಸಿ ರೂಂಗಳಲ್ಲಿ ಕೂತು ಕಾಲಹರಣ ಮಾಡಿದ್ದು ಸಾಕು ಎಂದು ಗುಡುಗಿದ ಅವರು; ಮೊದಲು ಜಡತ್ವ ಬಿಟ್ಟು ಪ್ರತೀ ಜಿಲ್ಲೆಗೂ ಇಬ್ಬರು-ಮೂವರು ಮಂತ್ರಿಗಳನ್ನು ಕಳಿಸಿ. ವಿಶೇಷ ತಂಡಗಳನ್ನು ನಿಯೋಜಿಸಿ. ಸಚಿವರು ಕನಿಷ್ಠ 3 ದಿನ ಜಿಲ್ಲೆಗಳಲ್ಲಿಯೇ ಮೊಕ್ಕಂ ಹೂಡಲಿ. ಮೊದಲು ಜನರ ಬಳಿಗೆ ಹೋಗಿ ಅವರ ಕಷ್ಟಕ್ಕೆ ಮಿಡಿಯಲಿ ಎಂದು ಒತ್ತಾಯಿಸಿದರು.

ನನಗೆ ಆರೋಗ್ಯ ಸಮಸ್ಯೆ ಇಲ್ಲದೇ ಇದ್ದಿದ್ದರೆ ನೆರೆಪೀಡಿತ ಪ್ರದೇಶಗಳಲ್ಲಿ ಕನಿಷ್ಠ ಒಂದು ವಾರ ಕಾಳವಾದರೂ ಕ್ಯಾಂಪ್ ಮಾಡುತ್ತಿದ್ದೆ. ಇನ್ನೊಂದು ಕಡೆ 2 ದಿನಗಳ ಹಿಂದೆಯೇ ನಾನು ನೆರೆ ಪ್ರದೇಶಗಳಿಗೆ ಹೋಗಲು ಸಿದ್ದವಾಗಿದ್ದೆ. ಹವಾಮಾನ ಸರಿ ಇಲ್ಲದ ಕಾರಣ ಅಧಿಕಾರಿಗಳು ಬರಬೇಡಿ ಎಂದರು. ಪ್ರವಾಹ ಬಂದು ಎರಡುಮೂರು ದಿನಗಳು ಆದ ಮೇಲೆ ಮಂತ್ರಿಗಳು ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ. ಹೀಗೆ ಮಾಡಿದರೆ ಹೇಗೆ? ಎಂದು ಕುಮಾರಸ್ವಾಮಿ ಅವರು ರಾಜ್ಯ ಸರಕಾರವನ್ನು ಪ್ರಶ್ನೆ ಮಾಡಿದರು.

ಸರಕಾರಕ್ಕೆ ಕಿವಿಮಾತು ಹೇಳಿದ ಹೆಚ್ಡಿಕೆ:

ರಾಜ್ಯ ಕಾಂಗ್ರೆಸ್‌ ಸರಕಾರಕ್ಕೆ ಕಿವಿಮಾತು ಹೇಳಿದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಪದೇಪದೆ ಕೇಂದ್ರ ಸರಕಾರದ ಜೊತೆ ಘರ್ಷಣೆ ಮಾಡಿಕೊಳ್ಳಬೇಡಿ. ಅದರಿಂದ ಉಪಯೋಗ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸ ಇಡಿ. ಸರಿಯಾದ ರೀತಿಯಲ್ಲಿ ಮನವಿ ಕೊಟ್ಟು ಪರಿಹಾರ ಕೇಳಿದರೆ ಕೇಂದ್ರದ ನೆರವು ಸಿಗುತ್ತದೆ. ಮೊದಲು ಒರಟು ಮಾತು ಬಿಡಿ. ಈವರೆಗೂ ರಾಜ್ಯದ ಒಬ್ಬ ಸಚಿವ ಅಥವಾ ಅಧಿಕಾರಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರನ್ನು ಭೇಟಿ ಮಾಡಿಲ್ಲ ಎಂದು ಅವರು ಹರಿಹಾಯ್ದರು.

ಇಷ್ಟೊತ್ತಿಗೆ ಪರಿಹಾರ ಕ್ರಮಗಳು ಕೈಗೊಳ್ಳಬೇಕಿತ್ತು. ಸರಕಾರ, ಮುಖ್ಯಮಂತ್ರಿಗಳು ಇನ್ನಿತರರು ವಿಡಿಯೋ ಕಾನ್ಫರೆನ್ಸ್ ಮಾಡಿ ಗರಂ ಆಗಿದ್ದು ಸಾಕು. ಧಮ್ಕಿ, ಗರಂ ಆದರೆ ಕೆಲಸ ಆಗುತ್ತದೆಯೇ? ಮೊದಲು ನಿಮ್ಮ ಮಂತ್ರಿಗಳನ್ನು ತಂಡಗಳನ್ನಾಗಿ ಮಾಡಿ ಕಳುಹಿಸಿ. ಇವರ ದಮ್ಮು ತಾಕತ್ತುಗಳು ಎಲ್ಲಿಗೆ ಹೋದವು? ಹಿಂದೆ ಪಾದಯಾತ್ರೆ ಮಾಡಿದ್ದರು.

ಆದರೆ, ರಾಜ್ಯ ಅಭಿವೃದ್ಧಿ ವಿಷಯ ಬಂದಾಗ ಕೇಂದ್ರವನ್ನು ಸರಿದೂಗಿಸಿಕೊಂಡು ಹೋಗಿಲ್ಲ. ಮೋದಿ ಅವರ ಮೂರನೇ ಅವಧಿಯ ಸರಕಾರ ಬಂದು ಒಂದೂವರೆ ವರ್ಷವಾಯಿತು. ಈ ತನಕ ಯಾವ ಸಚಿವರೂ ಬಂದು ನನ್ನನ್ನು ಭೇಟಿ ಮಾಡಿಲ್ಲ. ಬೈಯುವುದರಿಂದ ಏನು ಆಗಲ್ಲ. ಬದಲಿಗೆ ದೆಹಲಿಗೆ ಬಂದು ಕೇಂದ್ರದ ಜೊತೆ ಮಾತಾಡಿ. ಮೊದಲು ಕೇಂದ್ರಕ್ಕೆ ಮನವಿ ಕೊಡಿ. ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿ. ಕೇಂದ್ರ ಸ್ಪಂದಿಸುತ್ತದೆ ಎಂದು ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದರು.

ರಾಜ್ಯದಲ್ಲಿ ಬೇಕಿಲ್ಲದ ವಿಷಯಗಳತ್ತ ಹೆಚ್ಚು ಕಾಲ ವ್ಯರ್ಥವಾಗುತ್ತಿದೆ. ಜಾತಿ ಗಣತಿ ಅಂತ ಮಾಡುತ್ತಿದ್ದಾರೆ. ಅದನ್ನು ಮಾಡಲು ಇನ್ನೊಂದು ದೊಡ್ಡ ಸಮಸ್ಯೆಯನ್ನು ಸೃಷ್ಟಿ ಮಾಡುತ್ತಿದ್ದಾರೆ. ಈ ಸರಕಾರದಿಂದ ಜನರಿಗೆ ಯಾವುದೇ ಉಪಯೋಗ ಆಗುತ್ತಿಲ್ಲ. ಕಾಂತರಾಜು ಆಯೋಗದ ಭಜನೆ ನಿಲ್ಲಿಸಿ.

ಗ್ಯಾರಂಟಿ ಕೊಟ್ಟೆವು ಎಂದರು. ಈಗ ಕಲ್ಯಾಣ ಕರ್ನಾಟಕವನ್ನು ಗ್ಯಾರಂಟಿಗಳು ಕಾಪಾಡುತ್ತಿವೆಯೇ? ಅವರಿಗೆ ನೆರೆಯನ್ನು ತಡೆದು ಶಾಶ್ವತ ಪರಿಹಾರ ನೀಡಬೇಕು. ಈ ಸರಕಾರದಿಂದ ಅದು ಸಾಧ್ಯವೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ಬೆಂಗಳೂರು ಪರಿಸ್ಥಿತಿ ನೋಡಿ:

ಬೆಂಗಳೂರು ನಗರದ ಪರಿಸ್ಥಿತಿ ಏನಾಗಿದೆ ಎಂದು ನೀವೇ ನೋಡುತ್ತಿದ್ದೀರಿ. ಬೆಂಗಳೂರು ಉಸ್ತುವಾರಿ ಸಚಿವರು ಭಾರೀ ಬಿಜಿ ಇದ್ದರು, ಹಾಗಾಗಿ ಅವರನ್ನು ಬಿಟ್ಟೇ ಸಿಎಂ ನಗರ ಪ್ರದಕ್ಷಿಣೆ ಮಾಡಿದರು. ಸಿಎಂ ಅವರು ಮುಚ್ಚಿದ ಗುಂಡಿ ನೋಡ್ಕೊಂಡು ಹೋಗುತ್ತಿದ್ದರೆ ಅವರ ಹಿಂದೆ ಹಾಕಿರುವ ಟಾರು ಕಿತ್ತುಕೊಂಡು ಹೋಗಿದೆ.

ಗ್ಯಾರಂಟಿ ಸ್ಕೀಮ್ ಮಾಡಿ ಖಜಾನೆ ಖಾಲಿ ಅಂಥ ನಾನು ಹೇಳಲ್ಲ. ಜನರೂ ಕೇಳಿರಲಿಲ್ಲ. ಆದರೆ ದಸರಾ ಹೆಸರಲ್ಲಿ ಈಗ ಬಸ್ ಟಿಕೆಟ್ ಬೆಲೆ ಹೆಚ್ಚಳ ಮಾಡಿದೆ ಸರಕಾರ. ಖಾಸಗಿ ಬಸ್ಸುಗಳ ಜತೆ ಕೆಎಸ್‌ಆರ್‌ಟಿಸಿ ಕೂಡ ದರ ಏರಿಕೆಗೆ ಪೈಪೋಟಿಗೆ ಬಿದ್ದಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.

ರೈತರಿಗೆ ಈ ಸರಕಾರ ಏನನ್ನೂ ಒಳ್ಳೆಯದು ಮಾಡಿಲ್ಲ. ಅವರಿಗೆ ಸಕಾಲಕ್ಕೆ ಅಗತ್ಯ ಸಾಲ ಸಿಗುತ್ತಿಲ್ಲ. ನಾನು ಸಿಎಂ ಆಗಿದ್ದಾಗ ೩೫% ಸಾಲ ನೀಡುತ್ತಿದ್ದೆ. ಈಗ ಇವರು ಗ್ಯಾರಂಟಿ ಕೊಟ್ಟವರು! ಎಷ್ಟು ಪರ್ಸೆಂಟ್ ಸಾಲ ಕೊಟ್ಟಿದ್ದೀರಿ, ಹೇಳಿ? ಎಂದು ಸಿಎಂಗೆ ಪ್ರಶ್ನೆ ಹಾಕಿದ ಕೇಂದ್ರ ಸಚಿವರು; ಇವರು ನೀಡುತ್ತಿರುವ ಸಾಲದ ಪ್ರಮಾಣ ಕೇವಲ ೧೭% ಗೆ ಕುಸಿದಿದೆ. ಇದು ಈ ಸರಕಾರದ ರೈತಪರ ಕಾಳಜಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ದಲ್ಲಿ ಉತ್ತಮ ಮಳೆಯಾಗಿದೆ.‌ ಜಲಾಶಯಗಳು ನಿರೀಕ್ಷೆಗೂ ಮೀರಿ ತುಂಬಿವೆ. ಇದರಿಂದ ರೈತರು ಖುಷಿಯಾಗಿದ್ದರು. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಡೆ ಮಳೆ ಹೆಚ್ಚಿ ಪ್ರವಾಹದ ಸ್ವರೂಪ ಪಡೆಯಿತು. ಗೌರಿ ಗನೇಶ ಹಬ್ಬದ ವೇಳೆಯಲ್ಲೇ ಕಲ್ಯಾಣ ಕರ್ನಾಟಕ, ಬೆಳಗಾವಿ ಭಾಗದಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ಈಗಲೂ ಸಹ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ದೊಡ್ಡ ಪ್ರವಾಹ ಉಂಟಾಗಿದೆ.

ನಾನು ಆ ಜಿಲ್ಲೆಗಳ ಡಿಸಿಗಳ ಜೊತೆ ದೂರವಾಣಿಯಲ್ಲಿ ಮಾತಾಡಿ ಮಾಹಿತಿ ಪಡೆದಿದ್ದೇನೆ. ಪ್ರತಿ ಒಂದು ಜಿಲ್ಲೆಯಲ್ಲೂ ಒಂದು ಲಕ್ಷ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿ ಆಗಿದೆ. ಮನೆಗಳಿಗೆ ನೀರು ನುಗ್ಗಿ ಜನರು ಬೀದಿಪಾಲಾಗಿದ್ದಾರೆ. ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ. ಇಷ್ಟೂ ಜಿಲ್ಲೆಗಳ 12 ಗೋಶಾಲೆಗಳು ಸಂಪೂರ್ಣ ಮುಳುಗಿವೆ. ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ ಎಂದು ಅವರು ಹೇಳಿದರು.

ನೆರೆಯ ಮಹಾರಾಷ್ಟ್ರದಿಂದ ನಿತ್ಯವೂ 4.5 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ ಬರುತ್ತಿದೆ. ಜೊತೆಗೆ ಕಲ್ಯಾಣ ಕರ್ನಾಟಕ ಭಾಗದ ಭೀಮಾ, ಕೃಷ್ಣಾ ನದಿ ಪಾತ್ರಗಳಲ್ಲಿಯೂ ಅತಿವೃಷ್ಠಿಯಾಗಿ ಅಷ್ಟೇ ಪ್ರಮಾಣದ ನೀರು ಹರಿಯುತ್ತಿದೆ. ಏಕಕಾಲಕ್ಕೆ ಇಷ್ಟು ದೊಡ್ಡ ಪ್ರಮಾಣದ ನೀರು ಪ್ರವಾಹ ಸ್ವರೂಪ ಪಡೆದು ಅಪಾರ ನಷ್ಟ ಉಂಟು ಮಾಡಿದೆ ಎಂದು ಅವರು ಹೇಳಿದರು.

ನೆರೆಪೀಡಿತ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದಲ್ಲಿ ಅನಾಹುತ ಆಗಿದೆ. ಹಳ್ಳಿಗಳಿಗೆ ಹಳ್ಳಿಗಳು ಜಲಾವೃತವಾಗಿವೆ. ಇಷ್ಟು ದಿನದಿಂದ ಜನರು ನೊಂದಿದ್ದಾರೆ. ಕಳೆದ ಹತ್ತು ವರ್ಷಗಳಿಂದಲೂ ಇದೇ ಸಮಸ್ಯೆ. ಈ ಬಾರಿ ಇಷ್ಟೊಂದು ಮಟ್ಟಿಗೆ ಪ್ರಳಯ ಸದೃಶ ನೆರೆ ಬಂದರೂ ಯಾವೊಬ್ಬ ಮಂತ್ರಿಯೂ ಭೇಟಿ ಕೊಟ್ಟಿಲ್ಲ. ಚಿಕ್ಕಮಗಳೂರು ಭಾಗದಲ್ಲಿ ಮಳೆ ಬಂದು ವಿಧ್ವಂಸ ಸೃಷ್ಟಿಯಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ, ಮನೆಗಳು ಹಾನಿಯಾಗಿವೆ. ಇಷ್ಟೆಲ್ಲಾ ಆಗಿದ್ದರೂ ಈವರೆಗೂ ಸರಕಾರ ಜನರ ನೆರವಿಗೆ ಬಂದಿಲ್ಲ ಎಂದು ಅವರು ದೂರಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!