ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕೇಂದ್ರ ಸರಕಾರ ರಾಜ್ಯ ಸರ್ಕಾರದ ಬೇಡಿಕೆಯಷ್ಟು ಯೂರಿಯಾ ಗೊಬ್ಬರ ಸರಬರಾಜು ಮಾಡದ್ದರಿಂದ ಮತ್ತು ಈ ವರ್ಷ ಹೆಚ್ಚಿನ ಬೇಡಿಕೆ ಇರುವುದರಿಂದ ಒಂದಷ್ಟು ಗೊಬ್ಬರದ ಅಭಾವವಾಗಿದೆ. ಕಾಳಸಂತೆಯಲ್ಲಿ ಗೊಬ್ಬರ ಮಾರಾಟವಾಗುತ್ತಿದೆ ಎಂಬ ಆರೋಪಕ್ಕೆ ಸೂಕ್ತ, ಸತ್ಯ ಮಾಹಿತಿ ನೀಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೇವಲ ರಾಜಕೀಯ ಉದ್ದೇಶದ ಆರೋಪ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ. ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶನಿವಾರ ಲಕ್ಷ್ಮೇಶ್ವರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ಯೂರಿಯಾ ಕಾಳ ಸಂತೆಯಲ್ಲಿ ಮಾರಾಟ ಆಗುತ್ತಿದೆ ಎಂಬ ವಿರೋಧಪಕ್ಷದ ಆರೋಪಕ್ಕೆ ಸೂಕ್ತ ದಾಖಲೆಯನ್ನು ಅಧಿಕಾರಿಗಳಿಗೆ ಸಲ್ಲಿಸಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿಗಳ ಭೇಟಿ ಕುರಿತು ಪ್ರತಿಕ್ರಿಯಿಸಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ಕಲ್ಪಿಸುವಂತೆ ಕೋರಲಾಗಿದೆ. ಅವರೂ ಸ್ಪಂದಿಸಿದ್ದಾರೆ ಎಂದರು.
ಲಕ್ಷ್ಮೇಶ್ವರ -ಗದಗ ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿದೆ. ತಾವೂ ಸಹ ಈ ಮಾರ್ಗದಲ್ಲಿ ಸಂಚರಿಸದೇ ಸುತ್ತುವರಿದು ಹೋಗುತ್ತಿದ್ದೀರಿ, ನಿರ್ಲಕ್ಷವೇಕೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಈಗಾಗಲೇ ಮುಳಗುಂದವರಗೆ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಉಳಿದ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದರು.
ಈ ವೇಳೆ ಕೆಪಿಸಿಸಿ ಸದಸ್ಯ ಆನಂದ ಗಡ್ಡದೇವರಮಠ, ಸುಜಾತಾ ದೊಡ್ಡಮನಿ, ಚನ್ನಪ್ಪ ಜಗಲಿ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಉಪಾಧ್ಯಕ್ಷ ಫಿರ್ದೋಷ ಆಡೂರ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ ಸೇರಿ ಪುರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು ಇದ್ದರು.
ಲಕ್ಷ್ಮೇಶ್ವರದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದ ಉತ್ತರ ದ್ವಾರ ದುರಸ್ಥಿ ಮತ್ತು ಅಭಿವೃದ್ದಿಗಾಗಿ ಪ್ರವಾಸೋದ್ಯಮ ಇಲಾಖೆಯಿಂದ 50 ಲಕ್ಷ ರೂ ಅನುದಾನ ಕಲ್ಪಸುವುದಾಗಿ ಹೇಳಿ ವರ್ಷಗಳೇ ಕಳೆಯಿತು. ಅದಕ್ಕಾಗಿ ದೇವಸ್ಥಾನ ಸಮಿತಿ ಮತ್ತು ಹಿರಿಯರು ತಮ್ಮ ಬಳಿ ಸಾಕಷ್ಟು ಸಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಆದಷ್ಟು ಬೇಗ ಅನುದಾನ ಕಲ್ಪಿಸುವುದಾಗಿ ಹೇಳಿದರು.