ಬೆಂಗಳೂರು: ಆಂಧ್ರ ಸಚಿವ ಕರೆದಾಕ್ಷಣ ಯಾವ ಉದ್ಯಮಿಯೂ ಇಲ್ಲಿಂದ ಓಡಿ ಹೋಗಲ್ಲ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಏರೋಸ್ಪೇಸ್ ಸಂಸ್ಥೆಗಳಿಗೆ ಆಂಧ್ರ ಸಿಎಂ ಪುತ್ರ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್ ಬಹಿರಂಗ ಆಫರ್ ನೀಡಿದ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು,
ನಾರಾ ಲೋಕೇಶ್ ಅವರ ಟ್ವೀಟ್ ಅನ್ನು ನಾನೂ ನೋಡಿದ್ದೇನೆ. ನಾನೂ ಅಲ್ಲೇ ಉತ್ತರ ಕೊಟ್ಟಿದ್ದೇನೆ. ಎಂಬಿ ಪಾಟೀಲ್‌ಗೂ ಸಾಮರ್ಥ್ಯವಿದೆ, ಕರ್ನಾಟಕ ರಾಜ್ಯವೂ ಸಮರ್ಥವಾಗಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಏರೋಸ್ಪೇಸ್ ಮಾತ್ರವಲ್ಲ,
ಎಐ, ಡೀಪ್ ಟೆಕ್, ಐಟಿ ಹೀಗೆ ಎಲ್ಲಾ ತರಹದ ಉದ್ಯಮಗಳಿಗೂ ಭೂಮಿ ಇದೆ. ಒಬ್ಬೇ ಒಬ್ಬ ಉದ್ಯಮಿಯೂ ಕರ್ನಾಟಕದಿಂದ ಹೊರಹೋಗಲು ನಾನು ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು.
ರಾಜ್ಯವು ವೈಮಾಂತರಿಕ್ಷ ವಲಯದಲ್ಲಿ ದೇಶದ ಶೇ. 65ರಷ್ಟು ಪಾಲು ಹೊಂದಿದೆ. ಜಾಗತಿಕ ಮಟ್ಟದಲ್ಲಿ ನಮ್ಮದು ಮೂರನೇ ಅತ್ಯುತ್ತಮ ಕಾರ್ಯ ಪರಿಸರವಾಗಿದೆ. ಉದ್ಯಮಗಳಿಗೆ ಭೂಮಿ ಕೊಟ್ಟಮಾತ್ರಕ್ಕೆ ಅವು ಅಲ್ಲಿಗೆ ಹೋಗುವುದಿಲ್ಲ. ಕಾರ್ಯ ಪರಿಸರ ಕೂಡ ಮಹತ್ತ್ವದ ಪಾತ್ರ ವಹಿಸುತ್ತದೆ ಎಂದು ಅವರು ತಿರುಗೇಟು ನೀಡಿದರು.