ಬೆಂಗಳೂರು: ಇತಿಹಾಸದಿಂದ ಪಾಠ ಕಲಿಯದೇ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಹೋರಾಟ ಮಾಡದೇ ಇದ್ದರೂ ಪರವಾಗಿಲ್ಲ, ಮಾರಾಟ ಮಾತ್ರ ಆಗಬೇಡ ಎನ್ನುವ ಕಿವಿಮಾತನ್ನು ರಾಜಕಾರಣಿಗಳಿಗೆ ಅಂಬೇಡ್ಕರ್ ಅವರು ಹೇಳಿದ್ದಾರೆ.
ನಾವುಗಳು ಇತಿಹಾಸದಿಂದ ಪಾಠ ಕಲಿಯದೇ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದ ಕಾರಣ ಪ್ರತಿಯೊಬ್ಬರು ಇತಿಹಾಸದಿಂದ ಪಾಠ ಕಲಿಯಬೇಕು ಎನ್ನುವ ಸಂದೇಶವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ ಎಂದು ಹೇಳಿದರು. ಅನೇಕ ರಾಜ್ಯಗಳಲ್ಲಿ ಜನರಿಂದ ಆಯ್ಕೆಯಾದ ಶಾಸಕರು ಮಾರಾಟವಾಗಿರುವ ನಿದರ್ಶನಗಳನ್ನು ನೋಡಿದ್ದೇವೆ.
ಇದು ನಮ್ಮೆಲ್ಲರ ಬದುಕಿಗೂ ಸಂಬಂಧ ಪಡುತ್ತದೆ ಎನ್ನುವ ಕಿವಿಮಾತನ್ನು ನಮಗೆ ಅಂಬೇಡ್ಕರ್ ಅವರು ಬಿಟ್ಟು ಹೋಗಿದ್ದಾರೆ. ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ಧರ್ಮ ಗ್ರಂಥಗಳನ್ನು ಆಯಾ ಧರ್ಮದವರು ಪವಿತ್ರ ಎಂದು ಹೇಳುತ್ತಾರೆ. ಇಡೀ ಭಾರತಕ್ಕೆ ಸಂವಿಧಾನವೇ ಪವಿತ್ರ ಗ್ರಂಥ. ಇದು ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತಿದೆ ಎಂದು ಹೇಳಿದರು.