ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಪುರಸಭೆ ಎದುರು ಬುಧವಾರ ಬೀದಿ ಬದಿ ವ್ಯಾಪಾರಸ್ಥರ ವಿವಿಧೋದ್ದೇಶಗಳ ಸಂಘದ ತಾಲೂಕ ಘಟಕದಿಂದ ನೂರಾರು ಬೀದಿ ಬದಿ ವ್ಯಾಪಾರಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಚುನಾವಣಾ ಕಾರ್ಯ ನಿಮಿತ್ತ ತೆರಳಿದ್ದ ಪುರಸಭೆ ಮುಖ್ಯಾಧಿಕಾರಿಗಳು ಸ್ಥಳಕ್ಕೆ ಬರಲು ವಿಳಂಬವಾದ ಹಿನ್ನೆಲೆಯಲ್ಲಿ ಪುರಸಭೆ ಗೇಟ್ ಎದುರಿನಲ್ಲಿ ಪ್ರತಿಭಟನೆಯನ್ನು ನಡೆಸಿ ಧಿಕ್ಕಾರ ಕೂಗಿದರು.
ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಆಗಮಿಸುತ್ತಿದ್ದಂತೆಯೇ ಬೀದಿಬದಿ ವ್ಯಾಪಾಸ್ಥರ ಸಂಘದ ಜಿಲ್ಲಾಧ್ಯಕ್ಷ ಭಾಷಾಸಾಬ ಮಲ್ಲಸಮುದ್ರ ಮತ್ತು ತಾಲೂಕಾಧ್ಯಕ್ಷ ಮಂಜುನಾಥ ಹೊಗೆಸೊಪ್ಪಿನ ಮಾತನಾಡಿ, ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ದಿನಕ್ಕೆ ನಿಗದಿಪಡಿಸಿದ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಆದರೆ ಜಿಲ್ಲಾಡಳಿತದ ಆದೇಶದ ಪ್ರಕಾರ ಬೀದಿಬದಿ ವ್ಯಾಪಾರಿಗಳಿಂದ ಯಾವುದೇ ಶುಲ್ಕ ಪಡೆಯುವಂತಿಲ್ಲ. ಒಂದು ವೇಳೆ ಪಡೆದಿದ್ದರೂ ಅವರಿಂದ ಸಂಗ್ರಹಿಸಿದ ಪ್ರತಿದಿನದ ಶುಲ್ಕದ ಸಂಗ್ರಹಣೆಯನ್ನು ಪಟ್ಟಣ ಮಾರಾಟ ಸಮಿತಿಯ(ಟಿವಿಸಿ) ಖಾತೆಗೆ ವರ್ಗಾವಣೆ ಮಾಡಬೇಕು ಎಂದು ಆದೇಶವಿದೆ. ಅದನ್ನು ಪುರಸಭೆಯವರು ಪಾಲಿಸುತ್ತಿಲ್ಲ.
ಅಲ್ಲದೆ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಇದ್ದರೂ ಅಂತವರಿಂದಲೂ ಶುಲ್ಕ ಸಂಗ್ರಹಿಸುತ್ತಿರುವದು ಮತ್ತು ಕೆಲವು ಕಡೆಗಳಲ್ಲಿ ಹೆಚ್ಚು ಶುಲ್ಕವನ್ನು ಸಂಗ್ರಹಿಸುತ್ತಿರುವದು ಕಂಡು ಬಂದಿದೆ. ಇದರ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರಲ್ಲದೆ, ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಬೇಕು. ಯಾವುದೇ ದಿನದ ಕರ, ನೆಲಬಾಡಿಗೆ ಇನ್ನಿತರೆ ಶುಲ್ಕ ವಸೂಲಿ ಮಾಡಬಾರದು. ಸಂಗ್ರಹಿಸಿದ್ದೇ ಆದಲ್ಲಿ ಸಂಗ್ರಹಿಸಿದ ಶುಲ್ಕವನ್ನು ಪಟ್ಟಣದ ಮಾರಾಟ ಸಮಿತಿ ಖಾತೆಗೆ ವರ್ಗಾವಣೆ ಮಾಡಿ ರಾಷ್ಟ್ರೀಯ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹೊರಡಿಸಿರುವ ಆದೇಶದಂತೆ ಬೀದಿ ಬದಿ ವ್ಯಾಪಾರಿಗಳ ಸಂರಕ್ಷಣೆ, ಹಿತರಕ್ಷಣೆಗೆ ಬಳಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮುನೀರಸಾಬ ಸಿದ್ದಾಪೂರ, ಹನುಮಂತಪ್ಪ ರಾಮಗೇರಿ, ದಾದಾಪೀರ ಬೆಂಡಿಗೇರಿ, ಮಂಜುನಾಥ ಬಸಾಪೂರ, ಪರಶುರಾಮ ಬಳ್ಳಾರಿ, ಮಹಬೂಬಸಾಬ ಸುಂಡಕೆ, ರಾಜೇಸಾಬ ಮುಲ್ಲಾನವರ, ಲಕ್ಷ್ಮಣ ಮುಳಗುಂದ, ಸೋಮವ್ವ ಬೆಟಗೇರಿ, ಶಬ್ಬೀರ ಅಹ್ಮದ ಶಿರಹಟ್ಟಿ ಮುಂತಾದವರಿದ್ದರು.
ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಮಹೇಶ ಹಡಪದ, ಶುಲ್ಕ ಸಂಗ್ರಹಣೆ ಹಣವನ್ನು ಪಟ್ಟಣ ಮಾರಾಟ ಸಮಿತಿಯ ಖಾತೆಗೆ ಜಮಾ ಮಾಡಲಾಗುತ್ತಿದೆ ಮತ್ತು ವ್ಯಾಪಾರಸ್ಥರಿಗೆ ಸಲ್ಲಬೇಕಾದ ಸೌಲಭ್ಯಗಳನ್ನು ತಲುಪುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.