ಬೆಳೆಯೂ ಇಲ್ಲ, ಬೆಲೆಯೂ ಇಲ್ಲ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರೈತರ ಮುಂಗಾರಿನ ನೆಚ್ಚಿನ ಬೆಳೆ ಹೆಸರು ಬೆಳೆಯೂ ಇಲ್ಲದೆ, ಗುಣಮಟ್ಟದ ಕಾರಣದಿಂದ ಬೆಲೆಯೂ ಇಲ್ಲದ್ದರಿಂದ ಹೆಸರು ಬೆಳೆದ ರೈತರ ಬದುಕು ಹಸನಾಗದಂತಾಗಿದೆ.

Advertisement

ಪ್ರಸಕ್ತ ಮುಂಗಾರು ಹಂಗಾಮಿನಲ್ಲಾದ ಸಕಾಲಿಕ ಮಳೆಗೆ ವಾಣಿಜ್ಯ ಬೆಳೆ ಹೆಸರು ಬಿತ್ತನೆ ಮಾಡಿ ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದರು. ಉತ್ತಮವಾಗಿಯೇ ಬೆಳೆದ ಹೆಸರಿಗೆ ಹವಾಮಾನ ವೈಪರಿತ್ಯದಿಂದ ಹಳದಿ, ಬೂದುರೋಗ, ವಿಪರೀತ ಕೀಟಬಾಧೆ ಆವರಿಸಿತ್ತು. ನಿಯಂತ್ರಣಕ್ಕಾಗಿ ಸಾವಿರಾರು ರೂ ಖರ್ಚು ಮಾಡಿ ರೈತರು ಮೂರು ಬಾರಿ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದರು. ಉಳಿದ ಬೆಳೆ ಅತಿವೃಷ್ಟಿಯಿಂದ ನೀರು ಪಾಲಾಗಿ ರೈತರ ಕನಸು ನುಚ್ಚು ನೂರಾಗಿದೆ. ಅಳಿದುಳಿದ ಬೆಳೆ ಕಟಾವಿನ ಅವಧಿಯಲ್ಲಿಯೇ ನಿರಂತರ ಸುರಿದ ಮಳೆಗೆ ಒಂದಷ್ಟು ಜಮೀನಿನಲ್ಲಿಯೇ ನೀರು ಪಾಲಾಯಿತು. ಕಟಾವು ಮಾಡಿಸಿ ಒಣ ಹಾಕಿದ ಉಳಿದ ಫಸಲೂ ಸಹ ಮಳೆ ಬಿಡುವಿಲ್ಲದ್ದರಿಂದ ಹಾಳಾಯಿತು. ನಿರಂತರ ಮಳೆಯಿಂದ ನೆಲ ಕಚ್ಚಿದ ಹೆಸರು ಗಿಡಲ್ಲಿಯೇ ಮೊಳಕೆಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು.

ಉಳಿದ ಹತ್ತರಲ್ಲಿ ಒಂದು ಪಾಲು ಮಾರುಕಟ್ಟೆಗೆ ತಂದರೆ ಕೇಳುವವರೇ ಇಲ್ಲದ್ದರಿಂದ ಕೇಳಿದ ಬೆಲೆಗೆ ಕೊಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಕರೆಗೆ ಸರಾಸರಿ 5/6 ಕ್ವಿಂಟಲ್ ಫಸಲು ನಿರೀಕ್ಷೆಯಲ್ಲಿದ್ದ ರೈತರ ಕೈಗೆ ಬಂದಿದ್ದು ಸರಾಸರಿ 1/2 ಕ್ವಿಂಟಲ್ ಮಾತ್ರವಿದ್ದು, ಅದೂ ಸಹ ಸಂಪೂರ್ಣ ಗುಣಮಟ್ಟ ಇಲ್ಲದ್ದರಿಂದ ಮಾರುಕಟ್ಟೆಯಲ್ಲಿ ಬೆಲೆ ಪಾತಾಳಕ್ಕೆ ಕುಸಿದಿದೆ. ಗೊಬ್ಬರ, ಬೀಜ, ಬಿತ್ತನೆ, ಕ್ರಿಮಿನಾಶಕ ಬಳಕೆ, ಆಳು ಸೇರಿ ಪ್ರತಿ ಎಕರೆ ಹೆಸರು ಬಿತ್ತನೆ ಪ್ರಾರಂಭದಿಂದ ಮಾರುಕಟ್ಟೆಗೆ ಸಾಗಿಸುವರೆಗೂ ಕನಿಷ್ಠ 25 ಸಾವಿರ ರೂ ಖರ್ಚು ಮಾಡಲಾಗುತ್ತಿದೆ. ಉತ್ತಮ ಗುಣಮಟ್ಟದ ಹೆಸರಿಗೆ 9000-10000 ರೂ ದರವಿದ್ದರೂ ಸದ್ಯ ರೈತರ ಹೆಸರು ಬೆಳೆಗೆ ಸಿಗುತ್ತಿರುವುದು ಕನಿಷ್ಠ 1000ದಿಂದ ಸರಾಸರಿ 5000 ರೂ ಮಾತ್ರ.

ಈ ವರ್ಷ ತಾಲೂಕಿನಲ್ಲಿ 5850 ಹೆಕ್ಟೇರ್ ಗುರಿ ಮೀರಿ ಬಿತ್ತನೆ ಮಾಡಲಾಗಿತ್ತು. ಬೆಳೆ ಹಾಳಾಗಿದ್ದರೂ ಕೃಷಿ ಕೂಲಿಕಾರರ ಕೊರತೆಯಿಂದ ಹೆಣ್ಣಾಳಿಗೆ 400 ರೂ, ಗಂಡಾಳಿಗೆ 500 ರೂ ಕೂಲಿ ಕೊಡಲಾಗಿದೆ. ಹೆಸರು ಬೆಳೆಯಷ್ಟೇ ಅಲ್ಲದೆ ಶೇಂಗಾ, ಹತ್ತಿ, ಉಳ್ಳಾಗಡ್ಡಿ, ಮೆಕ್ಕೆಜೋಳ, ಮೆಣಸಿನಕಾಯಿ ಬೆಳೆಗಳೂ ಹಾಳಾಗಿ ಸಂಪೂರ್ಣ ಮುಂಗಾರೇ ಕೈಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ.

“ಅಳಿದುಳಿದ ಒಂದಷ್ಟು ಬೆಳೆಯನ್ನು ಒಕ್ಕಲಿ ಮಾಡಿ ಮಾರುಕಟ್ಟೆಗೆ ತಂದರೂ ಕೇಳಿದ ಬೆಲೆಗೆ ಕೊಡಲೇಬೇಕಾಗಿದೆ. ಎಕರೆಗೆ ಕನಿಷ್ಟ 25/30 ಸಾವಿರ ರೂ ಖರ್ಚು ಮಾಡಿದ್ದೆವು. ಆದರೆ ಈಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಪೆಟ್ಟು ಅನುಭವಿಸುವ ಸ್ಥಿತಿ ನಮ್ಮದಾಗಿದೆ. ಹೆಸರಷ್ಟೇ ಅಲ್ಲದೇ ಮುಂಗಾರಿನ ಎಲ್ಲ ಬೆಳೆಗಳು ಹಾಳಾಗಿವೆ. ಹಿಂಗಾರಿನ ಬಿತ್ತನೆಗೆ ಮತ್ತೆ ಸಾಲ ಮಾಡಬೇಕು. ಆದ್ದರಿಂದ ಸರ್ಕಾರ ಅತಿವೃಷ್ಟಿ ಪರಿಹಾರ ಯೋಜನೆಯಡಿ ಹೆಸರು ಸೇರಿ ಮುಂಗಾರಿನಲ್ಲಿ ಹಾನಿಗೀಡಾದ ಎಲ್ಲ ಬೆಳೆಗಳಿಗೆ ಪ್ರತಿ ಎಕರೆಗೆ ಕನಿಷ್ಠ 20 ಸಾವಿರ ರೂ ಬೆಳೆಹಾನಿ ಪರಿಹಾರ, ಬೆಳೆವಿಮೆ ನೀಡಬೇಕು”

ಚನ್ನಪ್ಪ ಷಣ್ಮುಕಿ,

ಸೋಮನಗೌಡ ಪಾಟೀಲ-ರೈತರು.

“ಲಕ್ಷ್ಮೇಶ್ವರ ಎಪಿಎಂಸಿಯಲ್ಲಿ ಇದುವರೆಗೂ ಕೇವಲ 12 ಸಾವಿರ ಕ್ವಿಂಟಲ್ ಹೆಸರು ಮಾರಾಟವಾಗಿದೆ. ಉತ್ತಮ ಗುಣಮಟ್ಟದ ಹೆಸರಿಗೆ 9 ಸಾವಿರ ಮೇಲ್ಪಟ್ಟು ದರವಿದೆ. ಆದರೆ ರೋಗಬಾಧೆ, ಅತಿಯಾದ ಮಳೆಗೆ ಸಿಲುಕಿದ ಹೆಸರು ಸಂಪೂರ್ಣ ಗುಣಮಟ್ಟ ಕುಸಿದಿದ್ದರಿಂದ ದರ ಕುಸಿತ ಕಂಡಿದೆ”

ರುದ್ರಗೌಡ ಪಾಟೀಲ.

ಎಪಿಎಂಸಿ ಕಾರ್ಯದರ್ಶಿ, ಲಕ್ಷ್ಮೇಶ್ವರ

“ಅತಿಯಾದ ಮಳೆಯಿಂದ ತಾಲೂಕಿನಾದ್ಯಂತ ಹೆಸರು ಸೇರಿ ಮುಂಗಾರಿನ ಎಲ್ಲ ಬೆಳೆಗಳು ಹಾನಿಗೀಡಾಗಿವೆ. ಈ ಬಗ್ಗೆ ಕೃಷಿ, ಕಂದಾಯ, ತೋಟಗಾರಿಕೆ ಸೇರಿ ಇಲಾಖೆಯಿಂದ ಜಂಟೀ ಸಮೀಕ್ಷಾ ಕಾರ್ಯ ನಡಿದಿದೆ. ವಸ್ತುಸ್ಥಿತಿ ವರದಿಯನ್ನು ಮತ್ತು ರೈತರು ಬೆಳೆವಿಮೆ, ಬೆಳೆಹಾನಿ ಪರಿಹಾರಕ್ಕೆ ಸಲ್ಲಿಸಿದ ಅಹವಾಲು, ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು”

ಧನಂಜಯ ಎಂ.

ತಹಸೀಲ್ದಾರರು, ಲಕ್ಷ್ಮೇಶ್ವರ.


Spread the love

LEAVE A REPLY

Please enter your comment!
Please enter your name here