ಬೆಂಗಳೂರು: ಜನಪರ ಉದ್ದೇಶ, ಅರ್ಥಗರ್ಭಿತ ಕಾರಣವಿಲ್ಲದ ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಜನರ ಸ್ಪಂದನೆಯಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು. ಎಸ್.ಎಂ ಕೃಷ್ಣ ಅವರು ಕಾವೇರಿ ನೀರಿಗಾಗಿ ಪಾದಯಾತ್ರೆ ಮಾಡಿದ್ದರು.
ಭಾರತವನ್ನು ಒಂದುಗೂಡಿಸಲು, ಬೆಲೆ ಏರಿಕೆ, ನಿರುದ್ಯೋಗ ಖಂಡಿಸಿ, ಭ್ರಷ್ಟಾಚಾರ ವಿರುದ್ಧ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿದ್ದರು. ನಾವು ಗಣಿ ಲೂಟಿ ಖಂಡಿಸಿ ರಾಜ್ಯ ಹಾಗೂ ದೇಶದ ಸಂಪತ್ತು ರಕ್ಷಣೆಗೆ ಬಳ್ಳಾರಿ ಪಾದಯಾತ್ರೆ ಮಾಡಿದೆವು. ಕಾವೇರಿ ಜಲಾನಯನದ 10 ಜಿಲ್ಲೆಗಳಿಗೆ ನೀರು ಒದಗಿಸುವ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾವು ಪಾದಯಾತ್ರೆ ಮಾಡಿದ್ದೆವು” ಎಂದು ತಿಳಿಸಿದರು.
ಈಗ ಬಿಜೆಪಿ, ಜೆಡಿಎಸ್ ಮಾಡುತ್ತಿರುವ ಪಾದಯಾತ್ರೆ ಸದ್ದಿದೆಯಾ? ಅವರ ಪಾದಯಾತ್ರೆಯ ವಿಚಾರವೇನು? ಹಿಂದುಳಿದ ವರ್ಗದ ನಾಯಕ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದನ್ನು ಸಹಿಸಲಾಗದೇ ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಪಾದಯಾತ್ರೆಯಲ್ಲಿ ಬೇರೆ ಏನಾದರೂ ಮಹತ್ವದ ವಿಚಾರವಿದೆಯೇ? ಅವರ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆ ನೋಡುತ್ತಿದ್ದಾರೆ. ಅವರ ಪಾದಯಾತ್ರೆಗೆ ಜನರಿಂದ ಸ್ಪಂದನೆಯಿಲ್ಲ. ಪಾದಯಾತ್ರೆಯಲ್ಲಿ ಜನತಾದಳದ ಕಾರ್ಯಕರ್ತರೇ ಇಲ್ಲ. ಅವರು ಪಾದಯಾತ್ರೆಯಲ್ಲಿ ಹೊಡೆದಾಡಲಿ ಏನಾದರೂ ಮಾಡಿಕೊಳ್ಳಲಿ” ಎಂದು ತಿಳಿಸಿದರು.



