ಮನೆ ಎಷ್ಟೇ ಸ್ವಚ್ಛವಾಗಿದ್ದರೂ ಕೆಲವೊಮ್ಮೆ ಸ್ನಾನಗೃಹದಿಂದ ದುರ್ವಾಸನೆ ಬರುವುದು ಸಾಮಾನ್ಯ ಸಮಸ್ಯೆಯಾಗುತ್ತಿದೆ.
ಪ್ರತಿದಿನ ಸ್ವಚ್ಛಗೊಳಿಸಿದರೂ ಸಹ ಈ ವಾಸನೆ ಸಂಪೂರ್ಣವಾಗಿ ಹೋಗದಿರುವುದು ಅನೇಕರಿಗೆ ತೊಂದರೆಯಾಗಿದ್ದು, ಅತಿಥಿಗಳ ಮುಂದೆ ಮುಜುಗರಕ್ಕೂ ಕಾರಣವಾಗುತ್ತದೆ.
ಸಾಮಾನ್ಯವಾಗಿ ಜನರು ಫಿನೈಲ್, ರೂಮ್ ಫ್ರೆಶ್ನರ್‌ಗಳಂತಹ ರಾಸಾಯನಿಕ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇವು ತಾತ್ಕಾಲಿಕ ಪರಿಹಾರ ನೀಡುವುದರಲ್ಲೇ ಸೀಮಿತವಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಬಾತ್‌ರೂಮ್ ದುರ್ವಾಸನೆಗೆ ಮುಖ್ಯ ಕಾರಣವಾಗಿ ಒಳಚರಂಡಿಯಲ್ಲಿ ಸಂಗ್ರಹವಾಗುವ ಕೂದಲು, ಕಸ, ಸೋಪ್ ಅವಶೇಷಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಗುರುತಿಸಲಾಗಿದೆ.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಲು ನೈಸರ್ಗಿಕ ವಿಧಾನಗಳನ್ನು ಬಳಸುವುದು ಪರಿಣಾಮಕಾರಿ ಎಂದು ಸೂಚಿಸಲಾಗಿದೆ. ಅಡುಗೆ ಸೋಡಾ ವಾಸನೆ ನಿವಾರಣೆಗೆ ಸಹಕಾರಿ. ಬಿಳಿ ವಿನೆಗರ್ ಬಳಕೆ ಬ್ಯಾಕ್ಟೀರಿಯಾ ನಾಶಮಾಡಿ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ.
ಇದೇ ವೇಳೆ ಪುದೀನಾ ಮತ್ತು ಲ್ಯಾವೆಂಡರ್ ಎಣ್ಣೆಗಳನ್ನು ಬಳಸಿ ಸ್ನಾನಗೃಹಕ್ಕೆ ಸುಗಂಧ ನೀಡಬಹುದು. ನಿಂಬೆ ರಸದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೂಡ ವಾಸನೆ ನಿವಾರಣೆಗೆ ಸಹಾಯ ಮಾಡುತ್ತವೆ. ಕಾಫಿ ಬೀಜಗಳನ್ನು ನೀರಿನಲ್ಲಿ ಇಟ್ಟು ಸ್ನಾನಗೃಹದಲ್ಲಿ ಇರಿಸಿದರೆ ಸುಗಂಧ ವಾತಾವರಣ ನಿರ್ಮಾಣವಾಗುತ್ತದೆ.
ಅದೇ ರೀತಿ, ಸ್ನಾನಗೃಹದಲ್ಲಿ ಎಕ್ಸಾಸ್ಟ್ ಫ್ಯಾನ್ ಬಳಕೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ಇದು ಗಾಳಿಯ ಹರಿವನ್ನು ಸುಧಾರಿಸಿ ದುರ್ವಾಸನೆ ತಡೆಯಲು ಸಹಕಾರಿಯಾಗಿದೆ.
ಹೀಗಾಗಿ, ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ಸ್ನಾನಗೃಹವನ್ನು ಸದಾ ಸ್ವಚ್ಛ ಮತ್ತು ಸುಗಂಧಯುಕ್ತವಾಗಿರಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.



