HomeKarnataka Newsಇನ್ನು ಮುಂದೆ ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನ ಮಾಡಲ್ಲ: ಸಚಿವ ಎಂ.ಬಿ ಪಾಟೀಲ್

ಇನ್ನು ಮುಂದೆ ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನ ಮಾಡಲ್ಲ: ಸಚಿವ ಎಂ.ಬಿ ಪಾಟೀಲ್

For Dai;y Updates Join Our whatsapp Group

Spread the love

ಬೆಂಗಳೂರು: ಉದ್ದೇಶಿತ ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿಗಾಗಿ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಗೆ ಸೇರಿದ ಚನ್ನರಾಯಪಟ್ಟಣ, ಮಟ್ಟಿಬಾರ್ಲು ಮತ್ತು ಶ್ರೋತ್ರೀಯ ತೆಲ್ಲೋಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿನ 495 ಎಕರೆ ಜಮೀನನ್ನು ಸ್ವಾಧೀನ ಮಾಡದಿರಲು ತೀರ್ಮಾನಿಸಲಾಗಿದೆ. ಜತೆಗೆ ಈ ಹೋಬಳಿಯಲ್ಲಿ ಇನ್ನು ಮುಂದೆ ಕೈಗಾರಿಕಾ ಉದ್ದೇಶಗಳಿಗೆ ಸರಕಾರ ಯಾವುದೇ ಜಮೀನನ್ನು ವಶಪಡಿಸಿಕೊಳ್ಳದೆ ಇರಲು ನಿರ್ಧರಿಸಿದೆ. ಆದ್ದರಿಂದ ಭೂಸ್ವಾಧೀನ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ತಮ್ಮ ಹೋರಾಟವನ್ನು ಕೈಬಿಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

ಮಂಗಳವಾರ ಈ ಸಂಬಂಧ ಅವರು ವಿಧಾನಸೌದದ ತಮ್ಮ ಕಚೇರಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ದೇವನಹಳ್ಳಿ ಶಾಸಕರೂ ಆಗಿರುವ ಕೆ ಎಚ್ ಮುನಿಯಪ್ಪ ಅವರ ಜತೆ ಸುದೀರ್ಘ ಸಭೆ ನಡೆಸಿ ಈ ತೀರ್ಮಾನಕ್ಕೆ ಬಂದರು.

ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಇಬ್ಬರೂ ಸಚಿವರು, `ಉದ್ದೇಶಿತ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕಿಗೆ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1,777 ಎಕರೆ 2 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು 2021ರ ಆ.27ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಇದಾದ ಮೇಲೆ 2022ರ ಫೆ.15ರಂದು ಈ ಸಂಬಂಧ ಆದೇಶ ಹೊರಡಿಸಲಾಗಿತ್ತು.

ಆದರೆ ಹೋಬಳಿಯ ರೈತರು ಈಗಾಗಲೇ ಎರಡು ಬಾರಿ ಕೈಗಾರಿಕಾ ಉದ್ದೇಶಗಳಿಗಾಗಿ ಜಮೀನು ಕಳೆದುಕೊಂಡಿದ್ದಾರೆ. ಜತೆಗೆ ಚನ್ನರಾಯಪಟ್ಟಣ, ಮಟ್ಟಿಬಾರ್ಲು ಮತ್ತು ಶ್ರೋತ್ರೀಯ ತೆಲ್ಲೋಹಳ್ಳಿಗಳಲ್ಲಿನ ನೀರಾವರಿ, ಕೃಷಿ ಮತ್ತು ಜನವಸತಿಗಳನ್ನು ಪರಿಗಣಿಸಿ ಭೂಸ್ವಾಧೀನದಿಂದ ಈ ಹಳ್ಳಿಗಳ 231.23 ಎಕರೆ, 185.18 ಎಕರೆ ಮತ್ತು 78.21 ಎಕರೆಗೆ ಸ್ವಾಧೀನ ಪ್ರಕ್ರಿಯೆಯಿಂದ ವಿನಾಯಿತಿ ಕೊಡಲಾಗಿದೆ’ ಎಂದಿದ್ದಾರೆ.

ಈಗ ಮಿಕ್ಕಂತೆ ಉಳಿದ ಹತ್ತು ಗ್ರಾಮಗಳಾದ ಪಾಳ್ಯ, ಹರಳೂರು, ಪೋಲನಹಳ್ಳಿ, ಗೋಕರೆ ಬಚ್ಚೇನಹಳ್ಳಿ, ನಲ್ಲೂರು, ಮಲ್ಲೇಪುರ, ನಲ್ಲಪ್ಪನಹಳ್ಳಿ, ಚೀಮಾಚನಹಳ್ಳಿ, ಮುದ್ದೇನಹಳ್ಳಿ ಮತ್ತು ಹಾಡ್ಯಾಳ ವ್ಯಾಪ್ತಿಯಲ್ಲಿನ 1,232 ಎಕರೆ ಭೂಸ್ವಾಧೀನ ನಡೆಯಲಿದೆ. ಅದರಲ್ಲೇನೂ ಬದಲಾವಣೆ ಇಲ್ಲ. ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ಜಿಲ್ಲಾಧಿಕಾರಿ ಸೂಕ್ತ ಪರಿಹಾರ ಮೊತ್ತ ನಿಗದಿ ಪಡಿಸಲಿದ್ದಾರೆ. ಅಥವಾ ಸಂತ್ರಸ್ತ ರೈತರು ಆಸಕ್ತಿ ವ್ಯಕ್ತಪಡಿಸಿದರೆ 1 ಎಕರೆ ಅಭಿವೃದ್ಧಿ ಪಡಿಸಿದ ಭೂಮಿಯಲ್ಲಿ 10,771 ಚದರ ಅಡಿ ಜಮೀನನ್ನು ಬೇಕಾದರೂ ಕೊಡಲು ಅವಕಾಶವಿದೆ. ಈ ಜಾಗವನ್ನು ರೈತರು ವಾಣಿಜ್ಯೋದ್ದೇಶಗಳಿಗಾಗಿ ಬಳಸಿಕೊಳ್ಳಬಹುದು ಎಂದು ಅವರು ವಿವರಿಸಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದವರು ನಿರ್ದಿಷ್ಟವಾಗಿ ಚನ್ನರಾಯಪಟ್ಟಣ, ಮಟ್ಟಿಬಾರ್ಲು ಮತ್ತು ಶ್ರೋತ್ರೀಯ ತೆಲ್ಲೋಹಳ್ಳಿ ಗ್ರಾಮಗಳ ಜಮೀನಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಈ ಸಂಬಂಧ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ವಿಸ್ತೃತ ಸಭೆ ನಡೆಸಲಾಗಿತ್ತು. ರೈತರ ಕೋರಿಕೆಗೆ ಸರಕಾರ ಈಗ ಸ್ಪಂದಿಸಿದಂತಾಗಿದೆ. ಆದ್ದರಿಂದ ಇನ್ನು ಹೋರಾಟ ಬೇಡ.

ನಮ್ಮಲ್ಲಿ ಕೃಷಿ ಮತ್ತು ಕೈಗಾರಿಕೆ ಎರಡನ್ನೂ ಜೊತೆಜೊತೆಯಲ್ಲೇ ತೆಗೆದುಕೊಂಡು ಹೋಗಬೇಕಾಗಿದೆ. ನಾನು ಮತ್ತು ಮುನಿಯಪ್ಪ ಕೂಡ ರೈತ ಕುಟುಂಬಗಳಿಂದಲೇ ಬಂದವರು. ರೈತರ ನೋವು ನಮಗೆ ಅರ್ಥವಾಗುತ್ತದೆ. ಹಿಂದೆ ನಾವು ವಿರೋಧ ಪಕ್ಷದಲ್ಲಿದ್ದಾಗ ರೈತರನ್ನು ಭೇಟಿ ಮಾಡಿದ್ದ ಸಿದ್ದರಾಮಯ್ಯನವರು ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಭೂಸ್ವಾಧೀನ ಕುರಿತ ತೀರ್ಮಾನವನ್ನು ಪರಿಶೀಲಿಸುತ್ತೇವೆ ಎಂದಿದ್ದರು. ಈಗ ಆ ಮಾತಿಗೆ ತಕ್ಕಂತೆ ನಡೆದುಕೊಂಡಿದ್ದೇವೆ ಎಂದು ಪಾಟೀಲ್ ನುಡಿದಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!