ಇತ್ತೀಚೆಗೆ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹಲವರು ಜೀವ ಕಳೆದುಕೊಂಡಿದ್ದಾರೆ. ಘಟನೆಯ ಕುರಿತು ಸಾಕಷ್ಟು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಮೇಲೆ ದಾಳಿ ಮಾಡಿಯೇ ತೀರಬೇಕು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ರಮ್ಯಾ, ಯುದ್ಧ ಬೇಡ. ಯುದ್ಧದಿಂದ ಯಾರೂ ಉದ್ಧಾರ ಆಗಲ್ಲ, ಅದರಿಂದ ನಮ್ಮ ಸೈನಿಕರೇ ಸಾಯೋದು ಎಂದು ಹೇಳಿದ್ದಾರೆ.
ಪಹಲ್ಗಾಮ್ನಲ್ಲಿ ದಾಳಿ ಆಗಿರೋದು ಗುಪ್ತಚರ ವೈಫಲ್ಯ ಹಾಗೂ ಭದ್ರತಾ ಉಲ್ಲಂಘನೆನೇ ಕಾರಣ. ಹೇಗೆ ಉಗ್ರರು ಒಳಗೆ ಬಂದ್ರು, ಹೀಗೆಲ್ಲಾ ಆಗಲು ಏನು ನ್ಯೂನತೆ ಕಾರಣ ಅನ್ನೋದನ್ನು ತಿಳಿದುಕೊಳ್ಳಬೇಕು. ಈಗ ಸರ್ಕಾರದವರು ಏನು ಆ್ಯಕ್ಷನ್ ತೆಗೆದುಕೊಳ್ತಾರೆ ಅಂತ ನೋಡಬೇಕು ಎಂದಿದ್ದಾರೆ. ಈ ಹಿಂದೆ ಉಪೇಂದ್ರ ಜೊತೆಗಿನ ಸಿನಿಮಾವೊಂದಕ್ಕೆ ಕಾಶ್ಮೀರಕ್ಕೆ ಹೋಗಿ ಬಂದಿದ್ದೇನೆ. ಆಗ ನಾವು ಕಾಶ್ಮೀರದಲ್ಲಿ ಶೂಟಿಂಗ್ ಮಾಡುವಾಗ ಫುಲ್ ಸೆಕ್ಯೂರಿಟಿ ಕೊಟ್ಟಿದ್ದರು ಎಂದು ತಿಳಿಸಿದರು.
ಯುದ್ಧದ ಬಗ್ಗೆ ಮಾತನಾಡಿ, ವೈಯಕ್ತಿಕವಾಗಿ ಹಿಂಸೆ ಮಾಡೋದನ್ನು ನಾನು ಇಷ್ಟಪಡಲ್ಲ. ಯುದ್ಧ ಮಾಡೋದ್ರಿಂದ ಯಾರು ಉದ್ಧಾರ ಆಗಲ್ಲ. ಎಲ್ಲದ್ದಕ್ಕೂ ಯುದ್ಧನೇ ಉತ್ತರ ಅಲ್ಲ, ಇದ್ದರಿಂದ ನಮ್ಮ ಸೈನಿಕರೇ ಸಾಯೋದು. ನಾವು ನಾಯಕರನ್ನು ಎಲೆಕ್ಟ್ ಮಾಡೋದು ನಮ್ಮ ರಕ್ಷಣೆ ಮಾಡಲಿ ಅಂತ ಅಲ್ವಾ. ಇನ್ನೊಂದು ಬಾರಿ ಈ ತರ ನಡೆಯದೇ ಇರೋ ಹಾಗೇ ನೋಡಿಕೊಳ್ಳಬೇಕು. ಅದು ಬಿಟ್ಟು ಯುದ್ಧನೇ ಪರಿಹಾರ ಅಲ್ಲ ಎಂದಿದ್ದಾರೆ.
ನರೇಂದ್ರ ಮೋದಿಯವರ ಮುಂದಿನ ನಿರ್ಧಾರ ಏನಿರಬಹುದು ಎಂದು ನಿಜವಾಗಲೂ ಗೊತ್ತಿಲ್ಲ. ನಾವು ಇಲ್ಲಿ ಇದ್ದೀವಿ, ಇದರ ಬಗ್ಗೆ ಕಾಮೆಂಟ್ ಮಾಡೋದು ಸುಲಭ. ಆದರೆ ಅಲ್ಲಿದ್ದವರಿಗೆ ಒಳಗೆ ಏನೆಲ್ಲಾ ರಾಜಕೀಯ ನಡೆಯುತ್ತಿದೆ ಎಂದು ಗೊತ್ತಿರುತ್ತದೆ. ಹಾಗಾಗಿ ನಾಯಕರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅಂತ ಕಾದು ನೋಡಬೇಕು. ನಾವು ಸಾಮಾನ್ಯ ಜನರು, ಕರೆನ್ಸಿಯ ಕಾನೂನು ಮಾನ್ಯತೆಯನ್ನು ರದ್ದುಗೊಳಿಸೋದ್ರಿಂದ ಟೆರರಿಸಂ ನಿಲ್ಲತ್ತದೆ ಎಂದು ಹೇಳಿದ್ರು. ಅದು ಇದುವರೆಗೂ ನಿಂತಿಲ್ಲ. ಅದಕ್ಕೆ ಉತ್ತರ ನಾಯಕರೇ ಹೇಳಬೇಕು ಎಂದು ರಮ್ಯಾ ಹೇಳಿದ್ದಾರೆ.