ಬೆಂಗಳೂರು: ದೇವರಾಜ ಅರಸು ಆಡಳಿತಕ್ಕೂ ಸಿದ್ದರಾಮಯ್ಯ ಆಡಳಿತಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ದೇವರಾಜ ಅರಸು ಅವರ ದಾಖಲೆ ಮುರಿದಿದ್ದಾರೆ ಎಂಬ ಹೇಳಿಕೆಗೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ದೇವರಾಜ ಅರಸು ಅವರ ಆಡಳಿತ ವೈಖರಿ ಬೇರೆ, ಸಿದ್ದರಾಮಯ್ಯ ಅವರ ಆಡಳಿತ ವೈಖರಿ ಬೇರೆ ಎಂದು ಸ್ಪಷ್ಟಪಡಿಸಿದರು. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಇಂತಹ ಸಂದರ್ಭದಲ್ಲಿ ದೊಡ್ಡ ಸಾಧನೆ ಮಾಡಿದ್ದೇನೆ ಎಂದು ತೋರಿಸುವ ಪ್ರಯತ್ನವನ್ನು ಜನರು ಮೆಚ್ಚುವುದಿಲ್ಲ ಎಂದು ಕಿಡಿಕಾರಿದರು.
ಇನ್ನೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಈಗಾಗಲೇ ಜಯಭೇರಿ ಬಾರಿಸುತ್ತಿದೆ ಎಂದು ತಿಳಿಸಿದ ಅವರು, ಮುಂದಿನ ಚುನಾವಣೆಯಲ್ಲೂ ಬಿಜೆಪಿ ನಿಶ್ಚಿತವಾಗಿ ದೊಡ್ಡ ಬಹುಮತದೊಂದಿಗೆ ಸರ್ಕಾರ ರಚಿಸುವ ದೃಷ್ಟಿಯಿಂದ ಕೆಲಸ ಮಾಡುತ್ತಿದೆ ಎಂದರು. ಪಕ್ಷದ ಕಾರ್ಯಕರ್ತರು ಉತ್ಸಾಹದಿಂದ ಮುಂದೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.



