ವಿಜಯಪುರ:- ರೈತರ ಜಮೀನುಗಳನ್ನು ವಕ್ಪ್ ಬೋರ್ಡಿಗೆ ಒಳಪಡಿಸಲಾಗುತ್ತಿದೆ ಎಂಬ ಭಯ ಇಲ್ಲಿನ ರೈತರನ್ನು ಕಾಡುತ್ತಿದೆ. ಸರ್ಕಾರ ವಕ್ಪ್ ಇಲಾಖೆಗೆ ಸಹಾಯ ಮಾಡುವ ಮೂಲಕ ರೈತರಿಗೆ ಮೋಸ ಮಾಡುತ್ತಿದೆ. ನಮ್ಮ ಜಮೀನು ವಕ್ಫ್ಗೆ ಹೋಗುವಂತೆ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿದ ಡಿಸಿ ಟಿ ಭೂಬಾಲನ್, ಯಾವುದೇ ಆಸ್ತಿಯ ಹಕ್ಕನ್ನು ನಿರ್ಣಯ ಮಾಡುವ ಅಧಿಕಾರ ಕಂದಾಯ ಇಲಾಖೆ ಅಧಿಕಾರಿಗಳಿಗೆ ಇರಲ್ಲ. ಯಾವುದೇ ಖಾಸಗಿ ವ್ಯಕ್ತಿ, ಖಾಸಗಿ ಸಂಸ್ಥೆ, ಸರ್ಕಾರಿ ಸಂಸ್ಥೆಯವರು ಅವರ ಬಳಿಯ ಸೂಕ್ತ ದಾಖಲಾತಿ ಕಂದಾಯ ಇಲಾಖೆಗೆ ನೀಡಬೇಕು.
ಸಂಬಂಧಿಸಿದವರಿಗೆ ಕಂದಾಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡುತ್ತಾರೆ. ನಂತರ ಹಕ್ಕನ್ನು ಖಚಿತಪಡಿಸಿಕೊಂಡು ದಾಖಲಾತಿಗಳನ್ನು ಇಂದೀಕರಣ ಮಾಡುವುದು ಕಂದಾಯ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಎಂದು ಹೇಳಿದ್ದಾರೆ.
1974ರಲ್ಲಿ ವಕ್ಫ್ ಬೋರ್ಡ್ ಗೆಜೆಟ್ ನೋಟಿಫಿಕೇಷನ್ ಹೊರಡಿಸಿತ್ತು. ವಕ್ಫ್ ಆಸ್ತಿಗಳ ಕಂದಾಯ ಇಲಾಖೆಗೆ ಇಂದೀಕರಣ ಮಾಡಲು ಪಟ್ಟಿ ನೀಡಿದ್ದಾರೆ. ವಿಜಯಪುರ ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿಗಳು ನೀಡಿದ್ದಾರೆ.
ದಾಖಲಾತಿ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಗಾಗಿ ರೈತರಿಗೆ, ಮಾಲೀಕರಿಗೆ ನೋಟಿಸ್ ನೀಡಲಾಗುತ್ತದೆ. ನೋಟಿಸ್‌ಗೆ ಭಯಪಡುವ ಅಗತ್ಯವಿಲ್ಲವೆಂದು ಡಿಸಿ ಧೈರ್ಯ ತುಂಬಿದ್ದಾರೆ.
ಸೂಕ್ತ ದಾಖಲಾತಿ ಕಂದಾಯ ಇಲಾಖೆಯ ಆಧಿಕಾರಿಗಳಿಗೆ ಸಲ್ಲಿಸಲು ಸಲಹೆ ನೀಡಿದ್ದು, ದಾಖಲಾತಿ ಆಧರಿಸಿ ಅಧಿಕಾರಿಗಳು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ.
ಒಂದು ವೇಳೆ ತಹಶೀಲ್ದಾರ್ ನೋಟಿಸ್ ನೀಡದೇ ಇಂದೀಕರಣ ಮಾಡಿದರೆ, ರೈತರು-ಮಾಲೀಕರು ಎಸಿಗೆ, ನಂತರ ಡಿಸಿಗೆ ಮೇಲ್ಮನವಿಯನ್ನು ಸಲ್ಲಿಸಬಹುದು. ನೋಟಿಸ್ ಬಂದ ತಕ್ಷಣ ಯಾರ ಹಕ್ಕೂ ತಕ್ಷಣ ಬದಲಾವಣೆಯಾಗಲ್ಲ. ಸೂಕ್ತ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಬೇಕು ಎಂದಿದ್ದಾರೆ.