ವಿಜಯಸಾಕ್ಷಿ ಸುದ್ದಿ, ಗದಗ: ದೇಶ ಭಕ್ತಿ, ದೇಶ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ದೇಶವಷ್ಟೇ ಅಲ್ಲದೇ ವಿದೇಶಗಳಲ್ಲಿಯೂ ಸ್ವಯಂ ಸೇವಕರನ್ನು ಹೊಂದಿದೆ. 100 ವರ್ಷಗಳ ಇತಿಹಾಸ ಹೊಂದಿರುವ ಸಂಘವನ್ನು ತಮ್ಮ ರಾಜಕೀಯ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸಲು ಪ್ರಿಯಾಂಕ ಖರ್ಗೆ ಸೇರಿದಂತೆ ಅನೇಕರು ನಿಷೇಧಿಸುತ್ತೇವೆ ಎಂದಿರುವುದು ಖಂಡನಿಯ. ಕೂಡಲೇ ಪ್ರಿಯಾಂಕಾ ಖರ್ಗೆ ದೇಶದ ಜನತೆಯ ಕ್ಷಮೆ ಕೋರಬೇಕು ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 1925ರಲ್ಲಿ ದೇಶ ಸೇವೆಗೆ ಸ್ಥಾಪಿಸಲಾದ ಸಂಘಕ್ಕೆ 10 ದಶಕದ ಇತಿಹಾಸವಿದೆ. ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿಯಾಗಿದ್ದು, ದೇಶ ರಕ್ಷಣೆಗೆ ನಿಂತ ಸ್ವಯಂಸೇವಕರ ಸಂಘದ ನಿಷೇಧ ಯಾರಿಂದಲೂ ಸಾಧ್ಯವಿಲ್ಲ. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಆರ್‌ಎಸ್‌ಎಸ್ ನಿಷೇಧಿಸುವ ಹೇಳಿಕೆ ಕೊಡುತ್ತಿರುವುದು ದೇಶದ ಸಾರ್ವಜನಿಕರಿಗೆ ಮಾಡಿರುವ ಅಪಮಾನವಾಗಿದೆ ಎಂದಿದ್ದಾರೆ.
ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬೆಂಗಳೂರು ಶಾಸಕ ಮುನಿರತ್ನ ಅವರಿಗೆ ಗಣವೇಷದಲ್ಲಿರುವಾಗಲೇ ತುಂಬಿದ ಸಾರ್ವಜನಿಕ ಸಭೆಯಲ್ಲಿ ನಿಂದಿಸಿ ಅವಮಾನ ಮಾಡಿದ್ದಾರೆ.
ಇದೇ ಡಿ.ಕೆ. ಶಿವಕುಮಾರ ವಿಧಾನಸಭೆಯಲ್ಲಿ ಸಂಘದ ಗೀತೆ ಹಾಡಿದ್ದನ್ನು ಮರೆತಿದ್ದಾರೆ. ಸಂಘದ ಕಾರ್ಯ ಮೆಚ್ಚಿ ಇಡೀ ದೇಶವೇ ಜೊತೆಗೆ ನಿಂತಿದೆ. ಕೂಡಲೇ ಕಾಂಗ್ರೆಸ್ ಪಕ್ಷದ ನಾಯಕರು ಆರ್‌ಎಸ್‌ಎಸ್ ನಿಷೇಧಿಸುವ ಮಾತುಗಳನ್ನು ನಿಲ್ಲಿಸಿ ದೇಶದ ಜನತೆಯ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.