ಚೆನ್ನೈ: ದಳಪತಿ ವಿಜಯ್ ರಾಜಕೀಯ ಪ್ರವೇಶಿಸಿದ ನಂತರ ಸಂಕಷ್ಟಗಳು ಸರಮಾಲೆಯಂತೆ ಎದುರಾಗುತ್ತಿವೆ. ಕರೂರು ಕಾಲ್ತುಳಿತ ಪ್ರಕರಣದ ಚರ್ಚೆ, ಸಿಬಿಐ ವಿಚಾರಣೆಗಳು ಹಾಗೂ ತಮ್ಮ ಕೊನೆಯ ಸಿನಿಮಾ ‘ಜನ ನಾಯಗನ್’ಗೆ ಸಿಬಿಎಫ್ಸಿ ಪ್ರಮಾಣಪತ್ರ ವಿಳಂಬ – ಈ ಎಲ್ಲಾ ಬೆಳವಣಿಗೆಗಳು ವಿಜಯ್ ಅವರನ್ನು ಸುತ್ತಿಕೊಂಡಿವೆ.
ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗ ವಿಜಯ್ ಅವರ ಪಕ್ಷಕ್ಕೆ ‘ವಿಶಲ್’ ಚಿಹ್ನೆಯನ್ನು ಅಧಿಕೃತವಾಗಿ ಮಂಜೂರು ಮಾಡಿದೆ. ಈ ಹಿನ್ನೆಲೆಯಲ್ಲಿ ನಡೆದ ಬೃಹತ್ ಸಭೆಯಲ್ಲಿ ವಿಜಯ್ ತಮ್ಮ ವಿರೋಧಿಗಳಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.
“ಕಳೆದ ಮೂರು ದಶಕಗಳಲ್ಲಿ ರಾಜಕೀಯ ಪಕ್ಷಗಳು ಜನರನ್ನು ನಿರ್ಲಕ್ಷ್ಯ ಮಾಡಿವೆ. ಜನರು ನನಗೆ ನೀಡಿದ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತೇನೆ” ಎಂದು ಹೇಳಿದರು.
“ನಾನು ಯಾರಿಗೂ ಬಗ್ಗುವುದಿಲ್ಲ, ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ” ಎಂದು ಘೋಷಿಸಿದರು.
ಇತ್ತೀಚಿನ ದಿನಗಳಲ್ಲಿ ವಿಜಯ್ ರಾಜಕೀಯ ಒತ್ತಡದಿಂದ ಕುಗ್ಗಿದ್ದಾರೆ, ಅವರು ರಾಜಕೀಯದಿಂದ ಹಿಂದೆ ಸರಿಯಬಹುದು ಅಥವಾ ಬೇರೆ ಪಕ್ಷದೊಂದಿಗೆ ಸಂಧಾನ ಮಾಡಬಹುದು ಎಂಬ ವದಂತಿಗಳು ಹರಿದಾಡಿದ್ದವು. ಇದಕ್ಕೆ ಪ್ರತಿಕ್ರಿಯೆಯಂತೆ ವಿಜಯ್ ತಮ್ಮ ಭಾಷಣದಲ್ಲಿ ಈ ಮಾತುಗಳನ್ನಾಡಿದ್ದಾರೆ.
ಇನ್ನೊಂದೆಡೆ, ‘ಜನ ನಾಯಗನ್’ ಸಿನಿಮಾಗೆ ಸಿಬಿಎಫ್ಸಿ ಪ್ರಮಾಣಪತ್ರ ನಿರಾಕರಣೆ ವಿಚಾರ ನ್ಯಾಯಾಲಯದ ಮುಂದೆ ಇದ್ದು, ಜನವರಿ 27ರಂದು ತೀರ್ಪು ಪ್ರಕಟವಾಗಲಿದೆ. ಅಂದು ಈ ಸಿನಿಮಾದ ಮುಂದಿನ ಭವಿಷ್ಯ ಸ್ಪಷ್ಟವಾಗಲಿದೆ.



