ದಾವಣಗೆರೆ: ಕರ್ನಾಟಕ ಇತಿಹಾಸದಲ್ಲೇ ಲಿಂಗಾಯತರ ಮೇಲೆ ಯಾರೂ ಕೂಡ ಹಲ್ಲೆ ಮಾಡಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ಕೂಡಲ ಸಂಗಮ ಪಂಚಮಸಾಲಿ ಗುರುಪೀಠದ ಜಯಮೃತ್ಯುಂಜಯ ಸ್ವಾಮೀಜಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ಕರ್ನಾಟಕ ಇತಿಹಾಸದಲ್ಲೇ ಲಿಂಗಾಯತರ ಮೇಲೆ ಯಾರೂ ಕೂಡ ಹಲ್ಲೆ ಮಾಡಿರಲಿಲ್ಲ. ಲಿಂಗಾಯತರ ಮೇಲೆ ಮಾರಣಾಂತಿಕ ಹಲ್ಲೆ ರಾಜ್ಯ ಸರ್ಕಾರ ಕಾರಣವಾಗಿದೆ.
ನಮ್ಮ ಹೋರಾಟ ಹತ್ತಿಕ್ಕಲು ಉದ್ದೇಶಪೂರ್ವಕವಾಗಿ ಪೊಲೀಸರಿಂದ ಹಲ್ಲೆ ನಡೆಸಿದ್ದಾರೆ. ಇದುವರೆಗೂ ನಮಗೆ ಕ್ಷಮಾಪಣೆ ಕೇಳಿಲ್ಲ, ಹಲ್ಲೆ ಮಾಡಿದ ಅಧಿಕಾರಿಗಳ ಮೇಲೆ ಕ್ರಮವಾಗಿಲ್ಲ. ಮಾನವ ಹಕ್ಕು ಆಯೋಗಕ್ಕೂ ನಮ್ಮ ವಕೀಲರು ದೂರು ಸಲ್ಲಿಸಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಲಿಂಗಾಯತ ಹೋರಾಟವನ್ನು ಅಸಾಂವಿಧಾನಿಕ ಎಂದು ಸಿಎಂ ಸಿದ್ದರಾಮಯ್ಯ ಸದನದಲ್ಲೇ ಹೇಳಿದ್ದಾರೆ. ಹೊಡೆದಿದ್ದು ಅಲ್ಲದೆ ಗಾಯದ ಮೇಲೆ ಬರೆ ಎಳೆದಂತೆ ಮಾತನಾಡಿದ್ದಾರೆ. ಮತ್ತೆ ಅವರ ಬಳಿ ಹೋಗಿ ಮೀಸಲಾತಿ ಬಗ್ಗೆ ನಾವು ಹೇಳೋದಿಲ್ಲ.
ನಾನು ಪ್ರತಿಯೊಂದು ಹಳ್ಳಿಗೂ ಸಂಚಾರ ಮಾಡುತ್ತೇನೆ. ರಾಜ್ಯ ಸರ್ಕಾರ ಮಾಡಿದ ಅನ್ಯಾಯ ಬಗ್ಗೆ ಜನರಿಗೆ ತಿಳಿಸುತ್ತೇನೆ. ಲಾಠಿ, ಬೂಟು ಏಟು ಕೊಟ್ಟವರಿಗೆ ಏನು ಉತ್ತರ ಕೊಡುತ್ತೀರಿ. ಮೀಸಲಾತಿ ಕೊಡುತ್ತೇವೆ ಎನ್ನುವರಿಗೆ ಏನು ಉತ್ತರ ಕೊಡುತ್ತೀರಿ ಎಂದು ಅವರ ಮುಂದೆ ಇಡುತ್ತೇನೆ ಎಂದಿದ್ದಾರೆ.