ವಿಜಯಸಾಕ್ಷಿ ಸುದ್ದಿ, ರೋಣ : ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ನಿಮ್ಮ ಹಕ್ಕು ಚಲಾಯಿಸಿ. ಚುನಾವಣಾ ಆಯೋಗ ನೀಡಿರುವ ವೋಟರ್ ಹೆಲ್ಪ್ಲೈನ್, ಸಕ್ಷಾಮ್ ಆ್ಯಪ್, ಸಿವಿಜಿಲ್ ಆ್ಯಪ್‌ಗಳನ್ನು ಬಳಸಿ ನೈತಿಕ ಮತದಾನಕ್ಕೆ ಸಹಕರಿಸಿ ಹಾಗೂ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದ ದೂರುಗಳನ್ನು ನೀಡಬಹುದಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ. ಇನಾಮದಾರ ಹೇಳಿದರು.
ಲೋಕಸಭಾ ಚುನಾವಣೆ 2024ರ ಅಂಗವಾಗಿ ಗುರುವಾರ ರೋಣ ಪಟ್ಟಣದ ತಾಲೂಕು ಪಂಚಾಯಿತಿಯಿಂದ ಸಿದ್ದಾರೂಡ ಮಠದವರೆಗೆ ಹಾಗೂ ತಾಲೂಕಾ ಬಸ್ ನಿಲ್ದಾಣದಲ್ಲಿ ಮತದಾನ ಜಾಗೃತಿಗಾಗಿ ನಡೆದ ಬೈಕ್ ರ‍್ಯಾಲಿ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮುಂಭಾಗದಲ್ಲಿ ಸೆಲ್ಫಿ ಸ್ಟ್ಯಾಂಡ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮೇ 7ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೇ ವಿವೇಚನೆಯಿಂದ ಅರ್ಹರೆಲ್ಲರೂ ಮತ ಚಲಾಯಿಸಬೇಕು. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಕಡ್ಡಾಯವಾಗಿ ಮತದಾನ ಮಾಡಿ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು ಹಾಗೂ ಹೆಸ್ಕಾಂ ಸಿಬ್ಬಂದಿಗಳು ಭಾಗವಹಿಸಿದ್ದರು. ರೋಣ ತಾಲೂಕಿನ ಹೆಸ್ಕಾಂ ಸಿಬ್ಬಂದಿಗಳು ಸೇರಿದಂತೆ ತಾಲೂಕಿನ ವಿವಿಧ ಮಟ್ಟದ ಅಧಿಕಾರಿಗಳು ಬೈಕ್ ರ‍್ಯಾಲಿ ಮುಖಾಂತರ ಮತದಾನ ಜಾಗೃತಿ ಕುರಿತು `ಕಡ್ಡಾಯವಾಗಿ ಮತದಾನ ಮಾಡಿ’ ಇತ್ಯಾದಿ ನಾಮಫಲಕಗಳನ್ನು ಹಿಡಿದು ಮತದಾನ ಜಾಗೃತಿ ಹಾಗೂ ಮತದಾನದ ಬಗ್ಗೆ ಅರಿವು ಮೂಡಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಆಕರ್ಷಣೆಯಾದ ಸೆಲ್ಫಿ ಪಾಯಿಂಟ್
ರೋಣ ಪಟ್ಟಣದ ಬಸ್ ನಿಲ್ದಾಣದಲ್ಲಿ ಹಾಗೂ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಅಳವಡಿಸಿದ ಸೆಲ್ಪಿ ಪಾಯಿಂಟ್‌ಗೆ ಯುವ ಮತದಾರರ, ಮೊದಲ ಬಾರಿ ಮತದಾನ ಮಾಡುತ್ತಿರುವ ವಿದ್ಯಾರ್ಥಿಗಳ ಹಾಗೂ ಮಹಿಳೆಯರ ಗಮನ ಸೆಳೆಯತ್ತಿದೆ. ಭೇಟಿ ನೀಡಿದ ಹೆಚ್ಚಿನ ಮತದಾರರು ಈ ಸ್ಥಳದಲ್ಲಿ ತಮ್ಮ ಮೊಬೈಲ್ ಕ್ಯಾಮರಾ ಮೂಲಕ ಸೆಲ್ಪಿ ತೆಗೆದುಕೊಂಡಿದ್ದು ವಿಶೇಷವಾಗಿತ್ತು.