ಯಾರೂ ಆತ್ಮಹತ್ಯೆಯ ನಿರ್ಧಾರಕ್ಕೆ ಬರಬೇಡಿ: ನ್ಯಾ. ಮಾ. ಸಿ.ಎಸ್. ಶಿವನಗೌಡ್ರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಪಂಚದಾದ್ಯಂತ ಸೆಪ್ಟೆಂಬರ್ 10ರಂದು ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯನ್ನು 2003ರಿಂದ ಆಚರಿಸಲಾಗುತ್ತಿದೆ. ಹೆಚ್ಚುತ್ತಿರುವ ಆತ್ಮಹತ್ಯೆಗಳನ್ನು ತಡೆಯುವುದು ಈ ದಿನಾಚರಣೆಯ ಗುರಿಯಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ತಿಳಿಸಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಗದಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗದಗ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಗದಗ, ಗದಗ ವೈದ್ಯಕೀಯ ಮಹಾವಿದ್ಯಾಲಯ–ಮನೋವೈದ್ಯಕೀಯ ವಿಭಾಗ ಗದಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗದಗ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಗದಗ, ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಗದಗ, ಹಾಗೂ ಕೆ.ಎಲ್.ಇ. ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ–ಯುವ ರೆಡ್ ಕ್ರಾಸ್ ಘಟಕ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕೆ.ಎಲ್.ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ `ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ–2025’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಜೀವನ ಅತ್ಯಮೂಲ್ಯವಾದುದು. ಆದ್ದರಿಂದ ಆತ್ಮಹತ್ಯೆಯ ನಿರ್ಧಾರಕ್ಕೆ ಬರಬೇಡಿ. ಆತ್ಮಹತ್ಯೆ ಆಲೋಚನೆಗಳು ಬಂದ ಸಮಯದಲ್ಲಿ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆಯ ಸೇವೆ ಪಡೆಯಿರಿ. ಟೆಲಿ-ಮನಸ್ ಉಚಿತ ಸಹಾಯವಾಣಿ ಸಂಖ್ಯೆ 14416 ಇದರ ಸಹಾಯ ಪಡೆಯಲು ತಿಳಿಸಿದರು.

ಕೆ.ಎಲ್.ಇ. ಸಂಸ್ಥೆಯ ಜಗದ್ಗುರು ತೋಂಟದಾರ್ಯ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ. ಪಿ.ಜಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಜೀವನ ಅತ್ಯಮೂಲ್ಯವಾದುದು. ಎಲ್ಲಾ ಸಮಸ್ಯೆಗಳಿಗೆ ಸಾವು ಒಂದೇ ಪರಿಹಾರವಲ್ಲ. ಬದುಕಿನಲ್ಲಿ ಈಜಬೇಕು, ಇದ್ದು ಜಯಿಸಬೇಕು. ದೇಹ ಮತ್ತು ಮನಸ್ಸನ್ನು ಸದೃಢಗೊಳಿಸಿಕೊಂಡು ಆತ್ಮಹತ್ಯೆಯಂತಹ ನಿರ್ಧಾರಗಳಿಂದ ದೂರವಿರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ರಾಜೇಂದ್ರ ಸಿ. ಬಸರೀಗಿಡದ ಮಾತನಾಡಿ, ಖಿನ್ನತೆಯಿಂದ ಆತ್ಮಹತ್ಯೆಗಳು ಹೆಚ್ಚಾಗುತ್ತಿದ್ದು, ಖಿನ್ನತೆಗೆ ಸೂಕ್ತ ಚಿಕಿತ್ಸೆ ಇದೆ. ಆರೋಗ್ಯ ಇಲಾಖೆಯ ಸಹಾಯ ಪಡೆಯಲು ಹಾಗೂ ಟೆಲಿ-ಮನಸ್ ಉಚಿತ ಸಹಾಯವಾಣಿ 14416ಕ್ಕೆ ಕರೆಮಾಡಿ ಆಪ್ತ ಸಮಾಲೋಚನೆ ಪಡೆಯುವ ಮೂಲಕ ಪರಿಹಾರ ಕಂಡುಕೊಳ್ಳಲು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸ್ಥಳೀಯ ಆಡಳಿತ ಮಂಡಳಿ ನಿರ್ದೇಶಕ ಈಶಣ್ಣಾ ಮುನವಳ್ಳಿ ಮಾತನಾಡಿ, ವಿದ್ಯಾರ್ಥಿ ಜೀವನ ಬಂಗಾರದ ಜೀವನವಾಗಿದ್ದು, ಜೀವನದಲ್ಲಿ ಸಮಸ್ಯೆಗಳು ಬರುವುದು ಸಹಜ. ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ. ವಿದ್ಯಾರ್ಥಿಗಳು ಆತ್ಮಹತ್ಯೆಯ ಆಲೋಚನೆ ಮಾಡಬೇಡಿ ಎಂದು ತಿಳಿಸಿದರು.

ಮಹಾವಿದ್ಯಾಲಯದ ವಿದ್ಯಾರ್ಥಿನಿ ಮಂಗಳಾ ಬಡಿಗೇರ ಪ್ರಾರ್ಥಿಸಿದರು. ಉಪನ್ಯಾಸಕರಾದ ರಾಜೇಶ್ವರಿ ಪಾಟೀಲ್ ನಿರೂಪಿಸಿದರು. ವೈ.ಆರ್.ಸಿ ಕಾರ್ಯಕ್ರಮ ಅಧಿಕಾರಿ ಡಾ. ನಾಗರಾಜ ಒಬಯ್ಯ ವಂದಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ರೂಪಸೇನ ಚವ್ಹಾಣ, ಪುಷ್ಪಾ ಪಾಟೀಲ್, ರಾಜೇಂದ್ರ ಗಡಾದ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಕೆ.ಎಲ್.ಇ. ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.

ಉಪನ್ಯಾಸಕರಾಗಿ ಆಗಮಿಸಿದ್ದ ತಾಲೂಕಾ ಆರೋಗ್ಯಾಧಿಕಾರಿ ಡಾ. ಪ್ರೀತ್ ಖೋನಾ ಮಾತನಾಡಿ, ಪ್ರತಿ 40 ಸೆಕೆಂಡಿಗೆ 1 ಆತ್ಮಹತ್ಯೆ ಪ್ರಕರಣದಿಂದ ಸಾವು ಉಂಟಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ಕಳವಳಕಾರಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಎಂತಹುದೇ ಸಮಸ್ಯೆ ಬಂದರೂ ಆತ್ಮಹತ್ಯೆಯ ಆಲೋಚನೆ ಮಾಡುವುದಿಲ್ಲ ಎಂದು ಪ್ರತಿಜ್ಞೆಯನ್ನು ಸ್ವೀಕರಿಸಿ ಉತ್ತಮ ಜೀವನ ನಡೆಸಬೇಕೆಂದು ಕರೆ ನೀಡಿದರು.


Spread the love

LEAVE A REPLY

Please enter your comment!
Please enter your name here