ಬೆಂಗಳೂರು:- ನಿಗದಿಯಾಗಿರುವ ಪಿಎಸ್‌ಐ ದಿನಾಂಕ ಮುಂದೂಡಿಕೆ ಇಲ್ಲ ಎಂದು ಕೆಇಎ ಸ್ಪಷ್ಟಪಡಿಸಿದೆ.
ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳ ಒಟ್ಟು 164 ಕೇಂದ್ರಗಳಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಯನ್ನು ಸೆ.22ರಂದು ನಡೆಸಲು ತಯಾರಿ ನಡೆದಿದ್ದು, ಹೆಚ್ಚಿನ ನಿಗಾ ಇಡಲು ಪೊಲೀಸ್ ಇಲಾಖೆಯ ನೆರವು ಕೂಡ ಕೋರಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಈ ಸಂಬಂಧ ಗೃಹ ಸಚಿವರು ಹಾಗೂ ಡಿಜಿಪಿಗೂ ಪತ್ರ ಬರೆಯಲಾಗಿದೆ. ಸೂಕ್ಷ್ಮ ಕೇಂದ್ರಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸುವ ಬಗ್ಗೆಯೂ ಚರ್ಚೆ ಆಗಿದೆ ಎಂದು ಅವರು ವಿವರಿಸಿದ್ದಾರೆ.
ದಾವಣಗೆರೆ, ಧಾರವಾಡ, ಕಲಬುರಗಿ, ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯಲಿದೆ. ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ 66,990 ಮಂದಿ ಲಿಖಿತ ಪರೀಕ್ಷೆ ಬರೆಯಲಿದ್ದು, ಈಗಿನಿಂದಲೇ ಸಿದ್ಧತೆ ನಡೆಸಲಾಗಿದೆ ಎಂದು ಪ್ರಸನ್ನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸುವ ವಿಷಯದಲ್ಲಿ ಯಾವ ಅನುಮಾನವನ್ನೂ ಇಟ್ಟು ಕೊಳ್ಳುವುದು ಬೇಡ. ಗಾಳಿ ಸುದ್ದಿಗಳಿಗೆ ಮಹತ್ವ ಕೂಡ ಕೊಡಬೇಡಿ. ಯಾರು ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆಯುತ್ತಾರೋ ಅಂತಹವರಿಗೆ ಅನ್ಯಾಯವಾಗದ ಹಾಗೆ ನಾವು ಪರೀಕ್ಷೆ ನಡೆಸುತ್ತೇವೆ ಎಂದರು.