ಒಳ ಮೀಸಲಾತಿ ಹೋರಾಟಕ್ಕೆ ಸ್ಪಂದನೆಯಿಲ್ಲ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಒಳ ಮೀಸಲಾತಿ ನೀಡುವ ಕುರಿತು ಕಳೆದ 3 ದಶಕಗಳಿಂದ ಮಾಡುತ್ತಿರುವ ಹೋರಾಟಕ್ಕೆ ಯಾವುದೇ ಪಕ್ಷಗಳು ಗಮನ ಹರಿಸುತ್ತಿಲ್ಲ. ಈಗೀರುವ ಸರಕಾರವೂ ಸೂಕ್ತ ಸ್ಪಂದನೆ ನೀಡುತ್ತಿಲ್ಲ. ಶೀಘ್ರ ಒಳಮೀಸಲಾತಿ ಜಾರಿಗೊಳಿಸಿ ಇಲ್ಲವೇ ಕುರ್ಚಿ ಖಾಲಿ ಮಾಡಿ ಎಂದು ಪ್ರಭುರಾಜ್ ಕೊಡ್ಲಿ ಒತ್ತಾಯಿಸಿದರು.

Advertisement

ಅವರು ಸಮೀಪದ ಶಿಗ್ಲಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಮಾದಿಗ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಒಳಗಿಸಲಾತಿ ಜಾರಿಗಾಗಿ ಹೋರಾಟಗಳನ್ನು ನಡೆಸುತ್ತಾ ಬರುತ್ತಿದ್ದರೂ ಯಾವುದೇ ಸರ್ಕಾರ ಕ್ರಮ ಕೈಗೊಳ್ಳದಿರುವುದು ನೋವಿನ ಸಂಗತಿಯಾಗಿದೆ. ಹೊಸ ನೇಮಕಾತಿ, ಮುಂಬಡ್ತಿ ಮತ್ತು ಬ್ಯಾಕ್ಲಾಗ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವುದು ಬೇಡ. ಒಳ ಮೀಸಲಾತಿ ಜಾರಿಗೊಳಿಸುವವರೆಗೂ ಯಾವುದೇ ಕಾರಣಕ್ಕೂ ನೇಮಕಾತಿ ಮಾಡಬಾರದು. ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿರುವುದನ್ನು ತಪ್ಪಿಸಬೇಕು. ಮಾದಿಗ ಸಮುದಾಯದ ಶಾಸಕರು, ಸಚಿವರು ಸಚಿವ ಸಂಪುಟದಲ್ಲಿ ಧ್ವನಿಯೆತ್ತಬೇಕು ಎಂದು ಅವರು ಆಗ್ರಹಿಸಿದರು.

ಕ್ರಾಂತಿಕಾರಿ ಹೋರಾಟಗಾರ ಮಲ್ಲೇಶ ಮಾತನಾಡಿ, ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ, ಸಮುದಾಯದ ಹೋರಾಟಗಾರ ಪ್ರೊ. ಬಿ.ಕೃಷ್ಣಪ್ಪ ಅವರ ಸಮಾಧಿ ಸ್ಥಳದಿಂದ ಕ್ರಾಂತಿಕಾರಿ ರಥಯಾತ್ರೆ, ಬೆಂಗಳೂರಿನ ಫ್ರೀಡಂ ಪಾರ್ಕ್ವರೆಗೂ ಜರುಗುತ್ತಿದೆ. ಜಾತಿ ಗಣತಿ ದಾಖಲಾತಿ ಮಾಡುವ ಸಂದರ್ಭದಲ್ಲಿ ಮಾದಿಗ, ಮಾದರ್ ಅಂತ ಸ್ಪಷ್ಟವಾಗಿ ಪೆನ್ನಿನಿಂದ ಬರೆದುಕೊಳ್ಳುವಂತೆ ಹೇಳಬೇಕು. ಹರಿಜನ ಎಂಬ ಶಬ್ದವನ್ನು ಜಾತಿ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಬರೆಯಿಸಕೂಡದು. ಒಳ ಮೀಸಲಾತಿ ಜಾರಿಯಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ನುಡಿದರು.

ಕ್ರಾಂತಿಕಾರಿ ರಥಯಾತ್ರೆ ತಾಲೂಕಿಗೆ ಆಗಮಿಸುತ್ತಿದ್ದಂತೆ ಲಕ್ಷ್ಮೇಶ್ವರ ಹಾಗೂ ಶಿಗ್ಲಿ ಗ್ರಾಮದಲ್ಲಿ ಮಾದಿಗ ಸಮಾಜದ ಮುಖಂಡರು, ಯುವಕರು ಅದ್ದೂರಿಯಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಎನ್.ಡಿ. ಮೇಗಲಮನಿ, ಹನುಮಂತ ಛಬ್ಬಿ, ಕರಿಯಪ್ಪ ಶಿರಹಟ್ಟಿ, ಮೈಲಾರಪ್ಪ ಡಿ.ಎಚ್, ಚಂದ್ರು ಕರಜಿಗಿ, ಮನೋಹರ್ ಕರಜಗಿ, ಶಿವಾನಂದ ಮೇಗಲಮನಿ, ಮಾರ್ತಂಡಪ್ಪ ಗಾಳಪ್ಪನವರ್, ಸೋಮಣ್ಣ ಯತ್ತಿನಹಳ್ಳಿ, ಗುಡ್ಡಪ್ಪ ಮತ್ತೂರ್, ಬಸವರಾಜ ಹೊಸಮನಿ ಸೇರಿದಂತೆ ಅಂಬೇಡ್ಕರ್ ನಗರದ ಮಹಿಳೆಯರು, ಯುವಕರು, ಸಮುದಾಯದ ಮುಖಂಡರು ಇದ್ದರು.


Spread the love

LEAVE A REPLY

Please enter your comment!
Please enter your name here