ಕಾಂಗ್ರೆಸ್‌ನಲ್ಲಿ ಯಾವುದೇ ಬಿರುಕಿಲ್ಲ: ಡಿಸಿಎಂ ಡಿಕೆಶಿ

0
Spread the love

ಬೆಳಗಾವಿ: “ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಿರುಕಿಲ್ಲ. ೧೩೬ ಶಾಸಕರೂ ನಮ್ಮವರೇ. ನಮ್ಮಲ್ಲಿ ಬಿರುಕಿದೆ ಎಂದು ಹೇಳುವ ಬಿಜೆಪಿ ನಾಯಕರು ಒಮ್ಮೆ ಜೆ.ಎಚ್. ಪಟೇಲರ ಭಾಷಣ ಕೇಳಿಸಿಕೊಳ್ಳಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು. ಬೆಳಗಾವಿಯ ಶಾಸಕರು, ಸಚಿವರು ನಿಮ್ಮನ್ನು ಸ್ವಾಗತಿಸಲು ಬರಲಿಲ್ಲ, ಸತೀಶ್ ಜಾರಕಿಹೊಳಿ ಅವರಿಗೂ ನಿಮಗೂ ಮುನಿಸಿದೆಯೇ ಎನ್ನುವ ಪ್ರಶ್ನೆಗೆ ಶಿವಕುಮಾರ್ ಅವರು ಹೀಗೆ ಉತ್ತರಿಸಿದರು.

Advertisement

“ನೆನ್ನೆ, ಮೊನ್ನೆ ಸತೀಶ್ ಅವರು ಮತ್ತು ನಾನು ಜೊತೆಯಲ್ಲಿಯೇ ಕುಳಿತು ಮಾತನಾಡಿದ್ದೇವೆ. ನಾನು ಬಂದಿರುವುದು ಖಾಸಗಿ ಕಾರ್ಯಕ್ರಮಕ್ಕೆ. ಲಕ್ಷ್ಮಿ ಹೆಬ್ಬಾಳಕರ್ ಅವರು ನಾಮಕರಣ ಕಾರ್ಯಕ್ರಮ ನಿಮಿತ್ತ ಭದ್ರಾವತಿಯಲ್ಲಿ ಇದ್ದಾರೆ. ಕೌಜಲಗಿ ಅವರಿಗೆ ಆರೋಗ್ಯ ಸರಿಯಿಲ್ಲ. ದಿಢೀರ್ ಎಂದು ನಿನ್ನೆ ರಾತ್ರಿ ಈ ಕಾರ್ಯಕ್ರಮ ನಿಗದಿಯಾದ ಕಾರಣಕ್ಕೆ ಬಂದಿದ್ದೇನೆ. ಎಲ್ಲರಿಗೂ ಅವರದೇ ಆದ ವೈಯಕ್ತಿಕ ಕೆಲಸಗಳು ಇರುತ್ತವೆ” ಎಂದು ಹೇಳಿದರು.

ಸತೀಶ್ ಜಾರಕಿಹೊಳಿ ಹಾಗೂ ನಿಮ್ಮ ನಡುವೆ ಬಿರುಕು ಮೂಡಿದೆಯೇ ಎಂದು ಕೇಳಿದಾಗ “ನಮ್ಮ ನಡುವೆ ಯಾವುದೇ ಬಿರುಕಿಲ್ಲ. ನನ್ನನ್ನು ಸ್ವಾಗತಿಸಲು ಬರಲಿಲ್ಲ, ಅದು ಇದು, ಎಂದು ನೀವೇ ಏನೇನೋ ಹೇಳುತ್ತೀರಿ?. ಇದೆಲ್ಲಾ ಕೇವಲ ಮಾಧ್ಯಮಗಳ ಸೃಷ್ಟಿ” ಎಂದರು.
“ನಮ್ಮಲ್ಲಿ ಯಾರ ಬಗ್ಗೆಯೂ ಮುನಿಸಿಲ್ಲ. ಎಲ್ಲಾ ಶಾಸಕರು ನಮ್ಮವರೇ. ನಿಮಗೂ ಹಾಗೂ ಬಿಜೆಪಿಯವರಿಗೆ ಒಂದು ಸುದ್ದಿ ಬೇಕು, ಅದಕ್ಕೆ ಹೀಗೆಲ್ಲಾ ಹೇಳುತ್ತೀರಿ” ಎಂದರು.ಸತೀಶ್ ಅವರು ಶಾಸಕರ ಜೊತೆ ಪ್ರವಾಸ ಮಾಡುತ್ತೇನೆ ಎಂದು ಹೇಳಿದ್ದಾರೆ, ಹೌದು. ಈ ವಿಚಾರವಾಗಿ ನಾವಿಬ್ಬರೂ ಚರ್ಚಿಸಿದೆವು” ಎಂದರು.

ಬೆಳಗಾವಿಯಿಂದಲೇ ಕಾಂಗ್ರೆಸ್ ಬಂಡಾಯ ಆರಂಭ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ ಎಂದು ಕೇಳಿದಾಗ “ಜೆ.ಎಚ್. ಪಟೇಲರ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ ಆದಾಗ ಅವರು ಒಂದು ಭಾಷಣ ಮಾಡಿದ್ದರು. ಹೋರಿ ಮತ್ತು ನಾಯಿ ಕತೆ. ಅದನ್ನು ನೀವು ಕೇಳಿದ್ದೀರಾ? ಅದನ್ನು ಬಿಜೆಪಿಯವರಿಗೆ ಕೇಳಿಸಿಕೊಳ್ಳಲು ಹೇಳಿ” ಎಂದು ತಿರುಗೇಟು ನೀಡಿದರು.”ಹುಕ್ಕೇರಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡಲು, ಈ ಭಾಗದ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡಲು ಹಾಗೂ ಮುಖ್ಯವಾಗಿ ಹುಕ್ಕೇರಿ ಮಠದ ಕಾರ್ಯಕ್ರಮಕ್ಕೆ ಬಂದಿದ್ದೇನೆ” ಎಂದು ಶಿವಕುಮಾರ್ ಅವರು ಸ್ಪಷ್ಟವಾಗಿ ಹೇಳಿದರು.


Spread the love

LEAVE A REPLY

Please enter your comment!
Please enter your name here