HomePolitics Newsಲಕ್ಷ್ಮೇಶ್ವರ ಪಟ್ಟಣದಲ್ಲಿ `ಥರ್ಡ್ ಐ' ಬೇಡ: ಸಾರ್ವಜನಿಕರ ವಿರೋಧ

ಲಕ್ಷ್ಮೇಶ್ವರ ಪಟ್ಟಣದಲ್ಲಿ `ಥರ್ಡ್ ಐ’ ಬೇಡ: ಸಾರ್ವಜನಿಕರ ವಿರೋಧ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ,ಲಕ್ಷ್ಮೇಶ್ವರ : ಪೊಲೀಸ್ ಇಲಾಖೆಯ ವತಿಯಿಂದ ಟ್ರಾಫಿಕ್ ನಿಯಮ ಪಾಲನೆಗಾಗಿ ಗದಗದಲ್ಲಿ ಅಳವಡಿಸಿರುವ `ಥರ್ಡ್ ಐ’ ಸಿಸಿ ಕ್ಯಾಮರಾ ಕಣ್ಗಾವಲು ಮಾದರಿಯ ವ್ಯವಸ್ಥೆಯನ್ನು ಪಟ್ಟಣದಲ್ಲಿ ಮಾರ್ಚ್ 1ರಿಂದ ಜಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕ ಪ್ರಕಟಣೆ ನೀಡಿದೆ.

ಇದರ ಬೆನ್ನಲ್ಲೇ ಸಾರ್ವಜನಿಕರು ಮತ್ತು ಹಲವು ಸಂಘಟನೆಗಳು ಅಪಸ್ವರ ವ್ಯಕ್ತಪಡಿಸಿದ್ದು, ಈ ವ್ಯವಸ್ಥೆಯನ್ನು ಜಾರಿಗೆ ತರದಂತೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿದೆ.

ಇದಕ್ಕೆ ಪೂರಕ ಎಂಬಂತೆ ಪಟ್ಟಣದಲ್ಲಿ ಥರ್ಡ್ ಐ ಅಳವಡಿಕೆಯನ್ನು ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ)ದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಶಾಸಕ ಡಾ.ಚಂದ್ರು ಲಮಾಣಿಯವರಿಗೆ ಹಾಗೂ ಸಿಪಿಐ ನಾಗರಾಜ ಮಾಡಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ವೇದಿಕೆ ಅಧ್ಯಕ್ಷ ಮಹೇಶ ಕಲಘಟಗಿ, ಕಡ್ಡಾಯವಾಗಿ ಹೆಲ್ಮೆಟ್ ಧರಿಸುವದು, ಸೀಟ್‌ಬೆಲ್ಟ್, ರಾಂಗ್ ಪಾರ್ಕಿಂಗ್ ಸೇರಿ ಕೆಲವು ನಿಯಮಗಳು ಕ್ಯಾಮರಾ ಮೂಲಕ ಜಾರಿಗೊಳಿಸುವುದರಿಂದ ರೈತರು, ವಿದ್ಯಾರ್ಥಿಗಳು, ಬೀದಿ ವ್ಯಾಪಾರಸ್ಥರು ಸೇರಿ ಜನಸಮಾನ್ಯರಿಗೆ ಅನಗತ್ಯ ಹೊರೆ ಮತ್ತು ತೊಂದರೆಯಾಗುತ್ತದೆ.

ಲಕ್ಷ್ಮೇಶ್ವರ ಬಹುತೇಕ ರೈತಾಪಿ ಜನರಿಂದ ಕೂಡಿದೆ ಮತ್ತು ಗ್ರಾಮೀಣ ಪ್ರದೇಶದ ಜನರು ನಿತ್ಯ ವ್ಯಾಪಾರ-ವಹಿವಾಟಿಗಾಗಿ ಅಡ್ಡಾಡುವ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯಿಂದ ರೈತರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯಾಗಲಿದೆ.

ಸಾವಿರಾರು ಜನರು ಸಂಚರಿಸುವ ಪ್ರಮುಖ ರಸ್ತೆಗಳಲ್ಲಿಯೇ ಈ ಥರ್ಡ್ ಐ ಪಿಟಿಝಡ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸಂಚಾರಿ ನಿಯಮಗಳನ್ನು ಅಳವಡಿಸುವದಕ್ಕೆ ವೇದಿಕೆಯವರು ಸ್ವಾಗತಿಸುತ್ತೇವೆ ಮತ್ತು ಗೌರವಿಸುತ್ತೇವೆ. ಆದರೆ ಪಟ್ಟಣದಲ್ಲಿ ಉತ್ತಮ ರಸ್ತೆಗಳಿಲ್ಲ, ಪಾರ್ಕಿಂಗ್ ಸ್ಥಳವಿಲ್ಲ, ಸಂಚಾರಿ ಫಲಕ, ಸಂಚಾರಿ ದೀಪಗಳಿಲ್ಲ. ಇವುಗಳನ್ನು ಮಾಡಿದಾಗ ಮಾತ್ರ ಈ ವ್ಯವಸ್ಥೆಗೆ ಜನರು ಹೊಂದಿಕೊಳ್ಳಬಹುದಾಗಿದೆ.

ಅಲ್ಲದೇ ಇದೀಗ ಬೇಸಿಗೆ ಕಾಲವಾಗಿದ್ದರಿಂದ ಹೆಲ್ಮೆಟ್ ಉಪಯೋಗಿಸುವದು ಸಹ ಕಷ್ಟವಾಗುತ್ತದೆ. ಸಂಚಾರಿ ನಿಯಮಗಳನ್ನು ಪಟ್ಟಣದಲ್ಲಿ 1-2 ಕಿ.ಮೀ ಹೊರತು ಪಡಿಸಿ ಅಳವಡಿಸಿದರೆ ಸೂಕ್ತ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಶಾಸಕರಿಗೆ ಮನವಿ ಮಾಡುವದಾಗಿ ಹೇಳಿದರು. ಶಾಸಕ ಡಾ.ಚಂದ್ರು ಲಮಾಣಿ, ಮತ್ತು ಸಿಪಿಐ ನಾಗರಾಜ ಮಾಡಳ್ಳಿ ಮನವಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ತಿರಕಪ್ಪ ಯಲಗಚ್ಚ, ಮುತ್ತು ಕುಂದಗೋಳ, ಚಂದ್ರು ಪಾಣಿಗಟ್ಟಿ, ಈಶ್ವರಗೌಡ ಪಾಟೀಲ, ಶ್ರೇಯಾಂಕ್ ಹಿರೇಮಠ, ಪ್ರಸನ್ನ ಅರಳಿ, ಪ್ರವೀಣ ದಶಮನಿ, ಸತೀಶ ಮೇದೂರ, ಪ್ರಜ್ವಲ್ ಗಾಂಜಿ, ಬಸನಗೌಡ ಮನ್ನಂಗಿ, ಯು.ಪದ್ಮನಾಭ ಶೆಟ್ಟಿ, ಸೋಮಣ್ಣ ಬೆಟಗೇರಿ, ಸೇರಿದಂತೆ ಅನೇಕರಿದ್ದರು.

ಕಾನೂನು ಪಾಲನೆ ಎಲ್ಲರ ಕರ್ತವ್ಯ. ಆದರೆ ಹೆಲ್ಮೆಟ್ ಕಡ್ಡಾಯದಿಂದ ರೈತರಿಗೆ, ಸಾರ್ವಜನಿಕರಿಗೆ ಪಟ್ಟಣ ಪ್ರದೇಶದಲ್ಲಿ ಸಂಚರಿಸುವವರಿಗೆ ತೊಂದರೆಯಾಗುತ್ತದೆ ಎನ್ನುವ ನಿಟ್ಟಿನಲ್ಲಿ ಸಾರ್ವಜನಿಕರು, ಸಂಘಟನೆಯವರು ಊರಿನ ಹೊರಗಡೆ ಈ ನಿಯಮಗಳನ್ನು ಅಳವಡಿಸುವಂತೆ ಮತ್ತು ಅಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಮನವಿ ಮಾಡಿದ್ದಾರೆ. ಮೊದಲೇ ಬರಗಾಲದ ಸಂಕಷ್ಟದಲ್ಲಿರುವ ಜನರಿಗೆ ಈ ವ್ಯವಸ್ಥೆ ಮತ್ತಷ್ಟು ಸಂಕಷ್ಟಕ್ಕೀಡುಮಾಡಲಿದೆ. ಈ ಕುರಿತಂತೆ ಎಸ್‌ಪಿಯವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗುವದು.
ಡಾ.ಚಂದ್ರು ಲಮಾಣಿ.
ಶಾಸಕರು, ಶಿರಹಟ್ಟಿ ಮತಕ್ಷೇತ್ರ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!