ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನದಲ್ಲಿರುವ ಪವಿತ್ರಗೌಡಗೆ ಯಾವುದೇ ವಿಶೇಷ ಸೌಲಭ್ಯ ನೀಡುವುದಿಲ್ಲ ಎಂಬ ಕಠಿಣ ಸಂದೇಶವನ್ನು ಕಾರಾಗೃಹ ಮಹಾನಿರ್ದೇಶಕ ಅಲೋಕ್ ಕುಮಾರ್ ನೀಡಿದ್ದಾರೆ.
ಶಿವಮೊಗ್ಗ ಜೈಲಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, “ಜೈಲಿನಲ್ಲಿರುವ ಎಲ್ಲ ಕೈದಿಗಳು ಸಮಾನರು. ಯಾರಿಗೂ ಪ್ರತ್ಯೇಕ ನಿಯಮ ಇಲ್ಲ” ಎಂದು ಖಡಕ್ ಹೇಳಿಕೆ ನೀಡಿದ್ದಾರೆ.
ಕಾರಾಗೃಹದಲ್ಲಿ ನೀಡುವ ಊಟವನ್ನು ಎಫ್‌ಎಸ್‌ಐಎಲ್ ಮೂಲಕ ಗುಣಮಟ್ಟ ಪರೀಕ್ಷೆ ಮಾಡಿ ಸರ್ಟಿಫಿಕೇಟ್ ಪಡೆದ ಬಳಿಕವೇ ಕೈದಿಗಳಿಗೆ ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮನೆಯಿಂದ ಊಟ ತರಲು ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
“ಒಬ್ಬರಿಗೆ ವಿನಾಯಿತಿ ಕೊಟ್ಟರೆ, ನಾಳೆ ಸಾವಿರಾರು ಕೈದಿಗಳು ಅದೇ ಬೇಡಿಕೆ ಇಡುತ್ತಾರೆ. ಇದು ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತದೆ” ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ಪ್ರಿಜನರ್ಸ್ ಆಕ್ಟ್ ಪ್ರಕಾರ ಕೈದಿಗಳಿಗೆ ಅಗತ್ಯ ಸೌಲಭ್ಯ ನೀಡಲಾಗುತ್ತಿದೆ. ಆದರೆ ವಿಐಪಿ ಟ್ರೀಟ್‌ಮೆಂಟ್ ಎಂಬುದು ಕಾರಾಗೃಹ ವ್ಯವಸ್ಥೆಯಲ್ಲಿ ಇಲ್ಲ ಎಂಬ ಸಂದೇಶವನ್ನು ಅಲೋಕ್ ಕುಮಾರ್ ಸ್ಪಷ್ಟವಾಗಿ ರವಾನಿಸಿದ್ದಾರೆ.



