ಉದ್ಯಮಿ ರತನ್ ಟಾಟಾ ಇನ್ನು ನೆನಪು ಮಾತ್ರ. ಕೈಗಾರಿಕೋದ್ಯಮಿ, ವಾಣಿಜ್ಯೋದ್ಯಮಿ ಮತ್ತು ಟಾಟಾ ಸನ್ಸ್‌ನ ಗೌರವಾಧ್ಯಕ್ಷರಾಗಿದ್ದ ರತನ್ ಟಾಟಾ ಅನಾರೋಗ್ಯದಿಂದ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. 86 ವಯಸ್ಸಿನ ಉದ್ಯಮಿ ಆಸಕ್ತಿದಾಯಕ ಮತ್ತು ಬದುಕಿನ ಅನೇಕ ಕಥೆಗಳನ್ನು ಬಿಟ್ಟು ಹೋಗಿದ್ದಾರೆ. ಇನ್ನೂ ಟಾಟಾ ಟ್ರಸ್ಟ್ಗಳ ಮುಖ್ಯಸ್ಥರಾಗಿ ನೋಯಲ್ ಟಾಟಾ ಅವರನ್ನು ನೇಮಕ ಮಾಡಲಾಗಿದೆ. ಟಾಟಾ ಗ್ರೂಪ್ನ ಮಾಲೀಕ ಸಂಸ್ಥೆಯಾದ ಟಾಟಾ ಸನ್ಸ್ನಲ್ಲಿ ಟಾಟಾ ಟ್ರಸ್ಟ್ಗಳು ಬಹುಪಾಲು ಷೇರುದಾರಿಕೆ ಹೊಂದಿವೆ. ಈ ಮೂಲಕ ಟಾಟಾ ಗ್ರೂಪ್ನ ಒಡೆತನ ನೋಯಲ್ ಟಾಟಾಗೆ ಸಿಗಲಿದೆ.
67 ವರ್ಷದ ನೋಯಲ್ ಟಾಟಾ ಅವರು ರತನ್ ಟಾಟಾ ತಂದೆಯ ಎರಡನೇ ಪತ್ನಿಯ ಮಗ. ಟಾಟಾ ಕುಟುಂಬಕ್ಕೆ ಸೇರಿದ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್ ಮಂಡಳಿಗಳ ಟ್ರಸ್ಟೀಗಳಲ್ಲಿ ಒಬ್ಬರಾಗಿರುವ ನೋಯಲ್ ಟಾಟಾ ಅವರು ಮುಂದಿನ ವಾರಸುದಾರ ಎಂಬುದು ಬಹುತೇಕ ನಿಶ್ಚಿತವಾಗಿತ್ತು.
87 ವರ್ಷದ ರತನ್ ಟಾಟಾ ಮೊನ್ನೆ ಬುಧವಾರ ಸಂಜೆ ಮುಂಬೈನಲ್ಲಿ ವಿಧಿವಶರಾಗಿದ್ದಾರೆ. ರತನ್ ಅವರ ತಂದೆ ನವಲ್ ಟಾಟಾ ಅವರಿಗೆ ಎರಡು ವಿವಾಹವಾಗಿತ್ತು. ಮೊದಲ ಪತ್ನಿಗೆ ವಿಚ್ಛೇದನ ನೀಡಿ ಎರಡನೇ ಮದುವೆಯಾಗಿದ್ದರು. ರತನ್ ಮತ್ತು ಜಿಮ್ಮಿ ಟಾಟಾ ಅವರು ಮೊದಲ ಪತ್ನಿಯ ಮಕ್ಕಳಾಗಿದ್ದಾರೆ. ನೋಯಲ್ ಟಾಟಾ ಅವರು ಎರಡನೇ ಪತ್ನಿಯ ಮಗ. ನೋಯಲ್ ಅವರಿಗೆ ಒಂದು ಗಂಡು ಮಗು ಸೇರಿ ಮೂವರು ಮಕ್ಕಳಿದ್ದಾರೆ.