HomeKarnataka Newsಎಲ್ಲರಿಗೂ ಕೋವಿಡ್​ ಟೆಸ್ಟ್‌ ಮಾಡಲ್ಲ, ಕೊರೋನಾ ನಿಯಂತ್ರಣದ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು? - ದಿನೇಶ್...

ಎಲ್ಲರಿಗೂ ಕೋವಿಡ್​ ಟೆಸ್ಟ್‌ ಮಾಡಲ್ಲ, ಕೊರೋನಾ ನಿಯಂತ್ರಣದ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು? – ದಿನೇಶ್ ಗುಂಡೂರಾವ್ ಹೇಳಿದ್ದೇನು?

For Dai;y Updates Join Our whatsapp Group

Spread the love

ಬೆಂಗಳೂರು:- ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್​ ಪಾಟೀಲ್​ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಭೆ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ಕೊರೋನಾ ತಪಾಸಣೆ ​ವಿಚಾರದಲ್ಲಿ ಹಳೆಯ ಪದ್ಧತಿಯನ್ನು ಅನುಸರಿಸುತ್ತೇವೆ. ಅಗತ್ಯವಿರುವ ಎಲ್ಲ ಕ್ರಮಗಳನ್ನ ನಾವು ತೆಗೆದುಕೊಳ್ಳುತ್ತೇವೆ. ಎಲ್ಲರಿಗೂ ಕೋವಿಡ್​ ಟೆಸ್ಟ್‌ ಮಾಡುವುದಿಲ್ಲ. ಸೋಂಕಿನ ಲಕ್ಷಣ ಇರುವವರಿಗೆ ಮಾತ್ರ ಟೆಸ್ಟ್ ಮಾಡುತ್ತೇವೆ ಎಂದರು.

ಕೇಂದ್ರದಿಂದ ಮಾರ್ಗಸೂಚಿ ಬಂದ ಬಳಿಕ ಲಸಿಕೆ ನೀಡಲು ಆರಂಭಿಸುತ್ತೇವೆ. ಕೊರೋನಾ ಸೋಂಕು ಲಕ್ಷಣ ಇರುವ ಮಕ್ಕಳಿಗೆ ಆಯಾ ಶಾಲೆಯ ಆಡಳಿತ ಮಂಡಳಿ ರಜೆ ನೀಡಬೇಕು. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ರಜೆ ತೆಗೆದುಕೊಳ್ಳದಂತೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ವಿದೇಶದಿಂದ ಬಂದವರಿಗೆ ಯಾವುದೇ ಟೆಸ್ಟಿಂಗ್​ ಮಾಡಲ್ಲ. ಕೋವಿಡ್​ ನಿಯಂತ್ರಣಕ್ಕೆ ನಾವು ತಯಾರಾಗಿದ್ದೇವೆ. ಬಾಣಂತಿಯರು, ಮಕ್ಕಳು, 50 ವರ್ಷ ಮೇಲ್ಪಟ್ಟವರು ಮತ್ತು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಮಾಸ್ಕ್​ ಧರಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು!?

1.ಸದ್ಯಕ್ಕೆ ಕೊರೋನಾ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ, ಮುಂಚಿತವಾಗಿಯೇ ಮುಂದೆ ಸಂಭವಿಸಬಹುದಾದ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯವಾದ ಎಲ್ಲಾ ಸವಲತ್ತು, ಸಲಕರಣೆಗಳನ್ನು ಸಜ್ಜುಗೊಳಿಸಿಟ್ಟುಕೊಳ್ಳಬೇಕು.

2.ಸದ್ಯಕ್ಕೆ ಗಂಭೀರ ಪರಿಸ್ಥಿತಿಗೆ ತಲುಪಿಲ್ಲವಾದರೂ ವೆಂಟಿಲೇಟರ್, ಆಕ್ಸಿಜನ್, ಔಷಧ ಸೇರಿ ಇತ್ಯಾದಿ ಅಗತ್ಯಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು.

3.ವಯಸ್ಸಾದವರು, ಗರ್ಭಿಣಿಯರು, ಹೃದಯ ಸಂಬಂಧಿ, ಶ್ವಾಸಕೋಶ ಸಮಸ್ಯೆ ಇರುವವರು ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವುದು ಒಳ್ಳೆಯದು. ಈ ಬಗ್ಗೆ ಅರಿವು ಮೂಡಿಸಬೇಕು.

4.ಪ್ರತೀ ವಾರ ಅಥವಾ ಅಗತ್ಯ ಬಿದ್ದರೆ ಮೂರು ದಿನಕ್ಕೊಮ್ಮೆ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಾ ತೀವ್ರ ನಿಗಾ ಇಡಬೇಕು.

5.ಗರ್ಭಿಣಿಯರಲ್ಲಿ ಆರೋಗ್ಯ ಸಮಸ್ಯೆ ಕಂಡುಬಂದರೆ ಅವರನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸುವುದನ್ನು ನಿಲ್ಲಿಸಿ, ಎಲ್ಲಾ ಆಸ್ಪತ್ರೆಗಳಲ್ಲೂ ಅಗತ್ಯ ವ್ಯವಸ್ಥೆ ಮಾಡಿಕೊಂಡಿರಬೇಕು.

6.ಶೀತ, ನೆಗಡಿ, ಜ್ವರ ಇರುವ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸದಿರುವುದು ಉತ್ತಮ. ಶಾಲೆಗಳೂ ಈ ಬಗ್ಗೆ ಗಮನ ಹರಿಸಿ ಶೀತ, ನೆಗಡಿ ಇರುವ ಮಕ್ಕಳನ್ನು ವಾಪಾಸ್ ಪೋಷಕರ ಮೂಲಕ ಮನೆಗೆ ಕಳುಹಿಸಬೇಕು.

7.ಎಂತಹುದೇ ಪರಿಸ್ಥಿತಿ ಎದುರಿಸಲು ಸರ್ವ ಸನ್ನದ್ಧವಾಗಿರಬೇಕು.

8.ಕಳೆದ ಜನವರಿಯಿಂದಲೂ ಕೊರೋನಾ ಪ್ರಕರಣಗಳು ಅಲ್ಲಲ್ಲಿ ಒಂದೋ – ಎರಡು ಕಾಣಬರುತ್ತಿದ್ದು, ಮೇ ತಿಂಗಳಲ್ಲಿ ಉಲ್ಬಣವಾಗಿದ್ದು ಮೇ ತಿಂಗಳ ನಾಲ್ಕನೇ ವಾರಕ್ಕೆ 62 ಪ್ರಕರಣಗಳು ವರದಿಯಾಗಿವೆ. ಆದರೆ ಗಂಭೀರ ಎನ್ನುವಂತಹ ಪ್ರಕರಣಗಳ ಸಂಖ್ಯೆ ಒಂದು ಮಾತ್ರ ಇದೆ.

9.ಎಸ್‌ಎಆರ್‌ಐ ಪ್ರಕರಣಗಳಲ್ಲಿ ತಪಾಸಣೆ ಕಾರ್ಯ ಈಗಾಗಲೇ ನಡೆಯುತ್ತಿದೆ. ನೆರೆಯ ರಾಜ್ಯಗಳಾದ ಕೇರಳದಲ್ಲಿ 95, ತಮಿಳು ನಾಡಿನಲ್ಲಿ 66, ಮಹಾರಾಷ್ಟ್ರ ಗಳಲ್ಲಿ 56 ಪ್ರಕರಣಗಳು ವರದಿಯಾಗಿವೆ.

10.ರಾಜ್ಯದಲ್ಲಿ ಕೊರೋನಾ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

11.ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೊರೋನಾ ಸಹಾಯವಾಣಿ ಪ್ರಾರಂಭಿಸಬೇಕು.

12.ಮುಂದಿನ ದಿನಗಳಲ್ಲಿ ಅವಶ್ಯಕತೆ ಕಂಡು ಬಂದರೆ ವಿಮಾನ ನಿಲ್ದಾಣಗಳಲ್ಲಿ ಹೊರಗಡೆಯಿಂದ ಬರುವ ಪ್ರಯಾಣಿಕರಿಗೆ ತಪಾಸಣಾ ಘಟಕಗಳನ್ನು ಪ್ರಾರಂಭಿಸಬೇಕು.

13.ಕೊರೋನಾ ವಿಷಯದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು.

14.ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಆಸ್ಪತ್ರೆಗಳೂ ಸರ್ವ ಸನ್ನದ್ಧವಾಗಿ ಇರಬೇಕು.

15.ಆರೋಗ್ಯ ಇಲಾಖೆ ಸಿಬ್ಬಂದಿ ರಜಾ ಹಾಕಿ ತೆರಳದೆ ಕೇಂದ್ರ ಸ್ಥಾನದಲ್ಲಿಯೇ ಇದ್ದು ಕಾರ್ಯ ನಿರ್ವಹಿಸಬೇಕು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!