ಧಾರವಾಡ: ವಕ್ಫ್ ಮಾತ್ರ ಅಲ್ಲ, ಮುಜರಾಯಿ ಇಲಾಖೆ ಜಾಗವೂ ಕಬಳಿಕೆ ಆಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ವಕ್ಫ್ ಮಾತ್ರ ಅಲ್ಲ, ಮುಜರಾಯಿ ಇಲಾಖೆ ಜಾಗವೂ ಕಬಳಿಕೆ ಆಗಿದೆ. ಕಂದಾಯ ಇಲಾಖೆ, ಬಿಡಿಎ ಸೈಟ್ ಗಳೂ ಕಬಳಿಕೆ ಆಗಿವೆ. ಹೀಗಾಗಿ ನೋಟಿಸ್ ಕೊಟ್ಟಿರುತ್ತಾರೆ. ಇದಕ್ಕಾಗಿಯೇ ಟ್ರಿಬ್ಯುನಲ್ ಇದೆ. ಆ ಮೂಲಕ ಎಲ್ಲವೂ ನಡೆಯುತ್ತದೆ ಎಂದರು.
ನಮ್ಮ ಸರ್ಕಾರ ಬಂದಾಗಿನಿಂದ ಯಾವ ರೈತರಿಗೂ ನೋಟಿಸ್ ಹೋಗಿಲ್ಲ. 2018ನಲ್ಲಿ ಹೋಗಿರುವ ನೋಟೀಸ್ ಅದು. ಇದು ನಮ್ಮ ಗಮನಕ್ಕೆ ಇಲ್ಲಿವರೆಗೂ ಬಂದಿರಲಿಲ್ಲ. ಈಗ ಗಮನಕ್ಕೆ ಬಂದಿದೆ. ಸೋಮವಾರ ಈ ಸಂಬಂಧ ಸಭೆ ಮಾಡಲು ಡಿಸಿಗೆ ಹೇಳಿದ್ದೇನೆ. ಸಂಬಂಧಿಸಿದವರ ಜೊತೆ ಸಭೆ ಮಾಡಿ ವರದಿ ಕೊಡಲು ಹೇಳಿದ್ದೇನೆ ಎಂದರು. ಇನ್ನೂ ಕರ್ನಾಟಕ ಉಪಚುನಾವಣೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಸಂಡೂರಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ನಿಶ್ಚಿತ. ಚೆನ್ನಾಗಿ ಪ್ರಚಾರ ನಡೆದಿದೆ. ಈ ಬಾರಿಯೂ ಸಂಪೂರ್ಣ ಬಹುಮತದಿಂದ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.