ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಿರಂತರವಾಗಿ ಕೃಷಿ ಕಾಯಕ ಮಾಡುವ ಮನೋಸ್ಥೈರ್ಯ ಹೊಂದಿರುವ ರೈತರಿಗೆ ಬಡತನ ಎಂಬುದಿಲ್ಲ ಎಂದು ವಿಜಯಪುರ ಜಿಲ್ಲೆ ಇಂಡಿ ತಾಲೂಕ ಸಾಂಬಾದ ಬಿಲೇನಿಯರ್ ಫಾರ್ಮರ್ ಆಫ್ ಇಂಡಿಯಾ ಖ್ಯಾತಿಯ ರೈತ ಭೀರಪ್ಪ ವಗ್ಗಿ ಹೇಳಿದರು.

Advertisement

ಇಲ್ಲಿನ ದುರ್ಗಾದೇವಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ದುರ್ಗಾದೇವಿ ಕೋ-ಆಪ್ ಕ್ರೆಡಿಟ್ ಲಿ ಸೊಸೈಟಿಯ 2025ನೇ ಸಾಲಿನ 21ನೇ ವರ್ಷದ ವಾರ್ಷಿಕ ಸಭೆ, ರೈತರ ಸಮ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು.

ಭೂತಾಯಿಯ ಸೇವೆ ಮಾಡಲೆಂದೇ ಈ ಭವದಲ್ಲಿ ಬಂದಿದ್ದೇನೆ. ಉಸಿರಿರುವವರೆಗೂ ದುಡಿಯುವುದೊಂದೇ ನನ್ನ ಕಾಯಕ. ಪ್ರಾಮಾಣಿಕವಾಗ ಭೂತಾಯಿಯ ಮಡಿಲಲ್ಲಿ ಕೆಲಸ ಮಾಡಿದ ರೈತರಿಗೆ ದುಃಖ ಎಂಬುದಿಲ್ಲ. ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದಕ್ಕೆ ನಾನೇ ಸಾಕ್ಷಿ. ಕೇವಲ 3 ಎಕರೆ ಜಮೀನಿನಲ್ಲಿ ದುಡಿದೆ, ಶ್ರಮಪಟ್ಟೆ. ದೇವರ ಕೃಪೆ, ಭೂತಾಯಿಯ ಒಲುಮೆಯಿಂದ ಈಗ ನಾನು 125 ಎಕರೆ ಜಮೀನುದಾರ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ. ಈ ನಿಟ್ಟಿನಲ್ಲಿ ರೈತರು ದುಡಿಮೆಯಲ್ಲಿ ಮಗ್ನರಾಗಬೇಕು. ಭೂತಾಯಿ ನಮ್ಮನ್ನೆಂದೂ ಕೈಬಿಡುವುದಿಲ್ಲ ಎಂದರು.

ಗದಗ ಸಮೀಪದ ಕಳಸಾಪೂರ ಗ್ರಾಮದ ರಮೆಶ ಚವ್ಹಾಣ ಹಾಗೂ ಗದುಗಿನ ಹನುಮಂತಪ್ಪ ಕೋಟೆಣ್ಣವರ ಅವರನ್ನೂ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಹಿರಿಯ ಸಾಹಿತಿಗಳಾದ ಐ.ಕೆ. ಕಮ್ಮಾರ ಭೀರಪ್ಪ ಅವರ ಪರಿಚಯ ಮಾಡಿದರು. ಸೊಸಾಯಿಟಿ ಅಧ್ಯಕ್ಷ ಎಂ.ಎಸ್. ಪಾಟೀಲ ರಮೇಶ ಹಾಗೂ ಹನಮಂತಪ್ಪ ಅವರನ್ನು ಪರಿಚಯಿಸಿದರು. ವೇದಿಕೆ ಮೇಲೆ ದುರ್ಗಾದೇವಿ ಕೋ-ಆಪ್ ಸೊಸಾಯಿಟಿ ಅಧ್ಯಕ್ಷ ಎಂ.ಎಸ್. ಪಾಟೀಲ, ಉಪಾಧ್ಯಕ್ಷ ಎಸ್.ಕೆ. ತಗ್ಗಿನಮಠ, ನಿರ್ದೇಶಕ ವ್ಹಿ.ಸಿ. ಬಳ್ಳೊಳ್ಳಿ, ಎಸ್.ಜಿ. ರೇವಣಕರ, ವ್ಹಿ.ಜಿ. ಬೆಟದೂರ, ಆರ್.ಸಿ. ಹೊನ್ನಗುಡಿ, ಆರ್.ಡಿ. ರಾಯ್ಕರ, ಎಸ್.ಎಸ್. ಚವ್ಹಾಣ, ಜೆ.ಎನ್. ಬ್ಯಾಟಿ, ಎಲ್.ಟಿ. ಬೇಂದ್ರೆ, ಎಸ್.ಆರ್. ಉಮಚಗಿ, ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಕೋರಿ ಉಪಸ್ಥಿತರಿದ್ದರು.

ವಿಜಯಲಕ್ಷ್ಮೀ ಹೂಗಾರ ಸ್ವಾಗತಿಸಿದರು. ದೀಪಾ ಗೋಟೂರ ಕಾರ್ಯಕ್ರಮ ನಿರೂಪಿಸಿದರು. ಆರ್.ಡಿ. ರಾಯ್ಕರ ವಂದಿಸಿದರು.

ಅಕಾಲಿಕ ಮಳೆ, ಅತಿವೃಷ್ಟಿ, ಅನಾವೃಷ್ಟಿಯ ನಡುವೆಯೂ ನಮ್ಮ ದೃಷ್ಟಿ ಮಾತ್ರ ದುಡಿಮೆಯತ್ತ ಇರಬೇಕು. ಧೃತಿಗೆಡದೆ ಕೃಷಿ ಕಾರ್ಯ ಮಾಡಿದರೆ ಒಂದಿಲ್ಲೊಂದು ದಿನ ಗೆಲುವು ಖಚಿತ ಎಂದು ರೈತ ಭೀರಪ್ಪ ವಗ್ಗಿ ಹೇಳಿದರು.


Spread the love

LEAVE A REPLY

Please enter your comment!
Please enter your name here