ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ತಾಲೂಕಿನಲ್ಲಿ ಕರವಸೂಲಿ ಪ್ರಮಾಣ ಕಡಿಮೆ ಇರುವ ಕಾರಣ ಫೆಬ್ರವರಿ ತಿಂಗಳಲ್ಲಿ ಕರವಸೂಲಿ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ. ಈ ತಿಂಗಳ ಪೂರ್ತಿ ಅಭಿಯಾನ ಹಮ್ಮಿಕೊಂಡು ಶೇ. 100ರಷ್ಟು ಪ್ರಗತಿ ಸಾಧಿಸಬೇಕು ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ.ಕಂದಕೂರು ಹೇಳಿದರು.
ತಾಲೂಕಿನ ಕುಂಟೋಜಿ ಗ್ರಾ.ಪಂ ಸೋಮವಾರ ಭೇಟಿ ನೀಡಿ ಕರವಸೂಲಿ ಮಾಸಾಚರಣೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ವೇಳೆ ಪಿಡಿಒ, ಪಂಚಾಯಿತಿ ಸಿಬ್ಬಂದಿಗಳ ಜೊತೆಗೆ ಮನೆ ಮನೆಗೆ ಭೇಟಿ ನೀಡಿ ತೆರಿಗೆ ಕಟ್ಟಲು ಸಾರ್ವಜನಿಕರಿಗೆ ಮನವಿ ಮಾಡಿದರು. ಎಲ್ಲಾ ಸಿಬ್ಬಂದಿಗಳು ಫೆ. 2ರಿಂದ 28ರವರೆಗೂ ನಿರಂತರ ಪ್ರತಿ ದಿನ ಒಂದು ತಿಂಗಳ ಕಾಲ ಕರವಸೂಲಿ ಮಾಡಿ ಶೇ. 100ರಷ್ಟು ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ಕುಂಟೋಜಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ದಾಖಲಾತಿ ಪರಿಶೀಲಿಸಿದರು. ನಂತರ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಕಾರ್ಯನಿರ್ವಹಣೆಯನ್ನು, ಸ್ವಚ್ಛತೆ ಮತ್ತು ಆಹಾರ ಗುಣಮಟ್ಟವನ್ನು ಪರಿಶೀಲಿಸಿದರು. ಮಕ್ಕಳಿಗೆ ಪೌಷ್ಟಿಕ ಹಾಗೂ ಗುಣಮಟ್ಟದ ಆಹಾರ ನೀಡುವಂತೆ ಸೂಚಿಸಿದರು.
ಕುಂಟೋಜಿ ಗ್ರಾ.ಪಂ ವ್ಯಾಪ್ತಿಯ ಗೌಡಗೇರಿ ಗ್ರಾಮ ಪ್ರಧಾನಮಂತ್ರಿ ಆದರ್ಶ ಗ್ರಾಮಕ್ಕೆ ಆಯ್ಕೆಯಾಗಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗೌಡಗೇರಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ನಂತರ ಶಾಲೆಗೆ ಭೇಟಿ ನೀಡಿ ಮಕ್ಕಳ ದಾಖಲಾತಿ, ಕಲಿಕಾ ಗುಣಮಟ್ಟ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪಿಡಿಒ ವಿಶ್ವನಾಥ ರಾಠೋಡ, ಮುದುಕಪ್ಪ ದೊಣ್ಣೆಗುಡ್ಡ, ಹುಸೇನಸಾಬ ತೋಟದ, ಪರಸಪ್ಪ ರಾಠೋಡ, ಹನುಮಂತ ಡೊಳ್ಳಿನ, ಗ್ರಾಮಸ್ಥರು, ಪಂಚಾಯತ ಸಿಬ್ಬಂದಿಗಳು ಇದ್ದರು.



