ಬೆಳೆ ಹಾನಿ ಜಂಟಿ ಸಮೀಕ್ಷೆಗೆ ಸೂಚನೆ

0
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಕಲಘಟಗಿ ಮತಕ್ಷೇತ್ರ ವ್ಯಾಪ್ತಿಯ ವಿವಿಧ ಹಳ್ಳಿಗಳಿಗೆ, ಬೆಳೆಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡಿ, ಕಲಘಟಗಿ ಪಟ್ಟಣದಲ್ಲಿ ಜನಸ್ಪಂದನ ಸಭೆ ಜರುಗಿಸಿ, ಸಾರ್ವಜನಿಕರ ಸಮಸ್ಯೆ, ಕುಂದು-ಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿದರು.

Advertisement

ಹುಲಕೊಪ್ಪ ಹಾಗೂ ಗಳಗಿ ಗ್ರಾಮಗಳ ಚನ್ನಬಸಪ್ಪ ಹಳ್ಯಾಳ ಅವರ ಜಮೀನಿಗೆ ಭೇಟಿ ನೀಡಿ, ಕಾಡುಹಂದಿ, ಕರಡಿ ಹಾಗೂ ಇತರ ಕಾಡು ಪ್ರಾಣಿಗಳಿಂದ ಗೋವಿನಜೋಳದ ಬೆಳೆ, ನಾಗರಾಜ ಹಳ್ಯಾಳ ಅವರ ತೋಟದ ಭತ್ತದ ಬೆಳೆ ಹಾಗೂ ಕಬ್ಬು ಬೆಳೆ ವೀಕ್ಷಣೆ ಮಾಡಿ, ಮಾಹಿತಿ ಪಡೆದುಕೊಂಡರು.

ನಂತರ ಅವರು ಸ್ಥಳದಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ, ಕಲಘಟಗಿ ಹಾಗೂ ಧಾರವಾಡ ತಾಲೂಕಿನ ಕೆಲವು ಪ್ರದೇಶಗಳು ಮಲೆನಾಡಿನ ಸೆರಗಿನಲ್ಲಿ ಇದ್ದು, ಗುಡ್ಡ, ಕಾಡು ಹೆಚ್ಚಾಗಿವೆ. ಮತ್ತು ಕಾಡುಪ್ರಾಣಿಗಳು ಸಾಕಷ್ಟು ಇವೆ. ರೈತರು ಪ್ರತಿವರ್ಷ ಬೆಳೆದ ಬೆಳೆಯನ್ನು ಸುಸೂತ್ರವಾಗಿ ರಾಶಿ ಮಾಡಿಕೊಂಡು ಬರಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕಾಗಿ ಕ್ರಮವಹಿಸಬೇಕಿದೆ ಎಂದರು.

ರೈತರ ವಿವಿಧ ಬೇಡಿಕೆಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಸೂಕ್ತ ಪರಿಹಾರ ನೀಡಬೇಕು. ಕಾಡಿನ ಅಂಚಿನಲ್ಲಿರುವ ರೈತರ ಜಮೀನುಗಳ ಪಕ್ಕದ ರಸ್ತೆಗಳಲ್ಲಿ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ನಿರಂತರವಾಗಿ ಪೆಟ್ರೋಲಿಂಗ್ ಮಾಡಬೇಕು. ರೈತರೊಂದಿಗೆ ಚರ್ಚಿಸಿ, ಅವರೊಡನೆ ಇದ್ದು, ಅರಣ್ಯ ಇಲಾಖೆ ಉತ್ತಮವಾಗಿ ಕೆಲಸ ಮಾಡಬೇಕೆಂದು ಸಚಿವ ಸಂತೋಷ ಲಾಡ್ ಸೂಚಿಸಿದರು.

ಈ ಸಂದರ್ಭದಲ್ಲಿ ರೈತರು ಮಾತನಾಡಿ, ಗುಡ್ಡ ಹಾಗೂ ಕಾಡಿನ ಪಕ್ಕದಲ್ಲಿರುವ ರೈತರಿಗೆ ಕಾಡುಪ್ರಾಣಿಗಳಿಂದ ಜೀವ ಭಯವಿದೆ. ಬಿತ್ತಿದ ಬೆಳೆಗಳು ಸರಿಯಾಗಿ ಬರುತ್ತಿಲ್ಲ. ಕೊಯ್ಲಿಗೆ ಬಂದಿರುವ ಬೆಳೆಗಳನ್ನು ಆನೆ, ಮಂಗಗಳು, ಕಾಡುಹಂದಿ, ಕರಡಿ, ಚಿಗರೆಯಂತಹ ಕಾಡು ಪ್ರಾಣಿಗಳು ಹಾಳು ಮಾಡುತ್ತಿವೆ. ಸರ್ಕಾರವು ಅರಣ್ಯ ಇಲಾಖೆಯ ಮೂಲಕ ನೀಡುವ ಬೆಳೆ ಪರಿಹಾರವನ್ನು ಹೆಚ್ಚಿಸಬೇಕು. ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಪ್ರೊಬೆಷನರಿ ರಿತೀಕಾ ವರ್ಮಾ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಕಲಘಟಗಿ ತಹಸೀಲ್ದಾರ ಬಸವರಾಜ ಮುಂತಾದವರಿದ್ದರು.

ಸಚಿವರು ಹುಲ್ಲಂಬಿ ಗ್ರಾಮ ವ್ಯಾಪ್ತಿಯ ಕಬ್ಬಿನ ತೋಟಗಳಿಗೆ ಭೇಟಿ ನೀಡಿ, ಬೆಳೆಹಾನಿ ಪರಿಶೀಲಿಸಿ, ಮನವಿ ಸ್ವೀಕರಿಸಿದರು. ಬೆಳೆಹಾನಿಗೆ ಸೂಕ್ತ ಪರಿಹಾರದ ಭರವಸೆ ನೀಡಿದರು. ಹುಲ್ಲಂಬಿ ರೈತರಾದ ತವನಪ್ಪ ರಾಯಪ್ಪ ಅಳಗವಾಡಿ ಅವರ 16 ಎಕರೆ 16 ಗುಂಟೆ ಜಮೀನು ಹಾಗೂ ಶಂಕ್ರವ್ವ ಕೋ.ರುದ್ರಪ್ಪ ಬಿಸರಳ್ಳಿ ಅವರ 5 ಎಕರೆ 26 ಗುಂಟೆ ಜಮೀನುದಲ್ಲಿ ಬೆಳೆದ ಮೆಕ್ಕೆಜೋಳ ಮತ್ತು ಕಬ್ಬು ಬೆಳೆ ಹಾನಿಯಾದ ಬಗ್ಗೆ ಸಚಿವರು ಪರಿಶೀಲಿಸಿದರು.


Spread the love

LEAVE A REPLY

Please enter your comment!
Please enter your name here