ವಿಜಯಸಾಕ್ಷಿ ಸುದ್ದಿ, ರೋಣ: ಪುರಸಭೆಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳು ಪಟ್ಟಣದ ಸ್ವಚ್ಛತೆ ಬಗ್ಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಅಂದಾಗ ಮಾತ್ರ ಸದಸ್ಯರು ನೆಮ್ಮದಿಯಿಂದ ಇರಲು ಸಾಧ್ಯ ಎಂದು ಸದಸ್ಯ ಸಂಗನಗೌಡ ಪಾಟೀಲ ಹೇಳಿದರು.
ಅವರು ಶನಿವಾರ ಪುರಸಭೆ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಸರ್ವ ಸದಸ್ಯರು ಸಹ ಸ್ವಚ್ಛತೆಯ ಕುರಿತು ಪ್ರಸ್ತಾಪ ಮಾಡುತ್ತಿದ್ದಾರೆ. ವಾರ್ಡಗಳಲ್ಲಿ ಜನರು ಸದಸ್ಯರುಗಳನ್ನು ಕೇಳಿದರೆ ಅವರೇನು ಉತ್ತರಿಸಬೇಕು, ಇನ್ನಾದರೂ ಸ್ವಚ್ಛತೆ ಬಗ್ಗೆ ಗಮನಹರಿಸಿ ಎಂದು ಸೂಚಿಸಿದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿಗಳು, ಸಿಬ್ಬಂದಿಗಳ ಕೊರತೆಯಿರುವುದರಿಂದ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ ಎಂದರು. ಆಗ ಸದಸ್ಯ ಬಾವಾಸಾಬ ಬೆಟಗೇರಿ ಸೇರಿದಂತೆ ಇತರೆ ಸದಸ್ಯರು, ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಿ ಎಂದಾಗ, ಸದಸ್ಯರು ಪಕ್ಷಾತೀತವಾಗಿ ಬೆಂಬಲ ವ್ಯಕ್ತಪಡಿಸಿದರು.
ಸದಸ್ಯ ಸಂತೋಷ ಕಡಿವಾಲ ಭೂ ಸೇನಾ ನಿಗಮದವರ ಕಾರ್ಯವೈಖರಿಯ ಬಗ್ಗೆ ಪ್ರಸ್ತಾಪಿಸಿದರು. ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾದ್ಯಕ್ಷ ದುರ್ಗಪ್ಪ ಹಿರೇಮನಿ, ದಾವಲಸಾಬ ಬಾಡಿನ, ಆನಂದ ಚಂಗಳಿ, ಸಂಗಪ್ಪ ಜಿಡ್ಡಿಬಾಗಿಲ ಸೇರಿದಂತೆ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.



