ಬೆಂಗಳೂರು:- ಸಕ್ಕರೆ ನಾಡು ಮಂಡ್ಯದ ಅಲಗೂರು ಗ್ರಾಮದಲ್ಲಿ ನಡೆದ ಮನೆಗಳ್ಳತನ ಪ್ರಕರಣ ಸಂಬಂಧ ಬೆಂಗಳೂರಲ್ಲಿ ಕುಖ್ಯಾತ ಮನೆಗಳ್ಳನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಲಗೂರು ಗ್ರಾಮದಲ್ಲಿ ಮನೆ ಬಾಗಿಲು ಒಡೆದು ಚಿನ್ನಾಭರಣ ಕದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ರೀಕಾಂತ್ ನನ್ನು ಮಾದನಾಯಕನಹಳ್ಳಿಯ ಅಂಚೆಪಾಳ್ಯದಲ್ಲಿ ಅರೆಸ್ಟ್ ಮಾಡಲಾಗಿದ್ದು, ಆರೋಪಿಯಿಂದ 42 ಲಕ್ಷ ಮೌಲ್ಯದ 348 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಸಿದ್ದುಗಾಗಿ ಪೊಲೀಸರಿಂದ ಹುಡುಕಾಟ ಮುಂದುವರಿದಿದೆ.
ಆರೋಪಿಗಳಾದ ಸಿದ್ದು ಮತ್ತು ಶ್ರೀಕಾಂತ್ ಸೇರಿ ಸುಮಾರು 248 ಗ್ರಾಂ ಚಿನ್ನಾಭರಣವನ್ನು ಅಲಗೂರು ಗ್ರಾಮದ ಮನೆಗಳಿಂದ ಕದ್ದಿದ್ದರು. ಸಿದ್ದು ಈಗಾಗಲೇ 40ಕ್ಕೂ ಅಧಿಕ ಕಳ್ಳತನ ಪ್ರಕರಣಗಳಲ್ಲಿ ಆರೋಪಿ ಆಗಿದ್ದಾನೆ. ಆದರೆ ಶ್ರೀಕಾಂತ್ ಮುಂಚೆ ಮಳವಳ್ಳಿ ಮಾರುಕಟ್ಟೆಯಲ್ಲಿ ಸಣ್ಣಪುಟ್ಟ ಕಳ್ಳತನಗಳಲ್ಲಿ ಭಾಗಿಯಾಗಿದ್ದ. ಆರೋಪಿಗಳು ಬೈಕ್ ಮೂಲಕ ಬಂದು ಮನೆಗಳ್ಳತನ ಮಾಡಿದಂತೆ ಮಾಹಿತಿ ದೊರಕಿದ್ದು, ಕಳೆದ ಆಗಸ್ಟ್ನಲ್ಲಿ ಮನೆಯವರು ತಮಿಳುನಾಡಿಗೆ ಹೋದ ಸಮಯದಲ್ಲಿ ಈ ಕಳ್ಳತನ ನಡೆದಿದೆ.
ಬಂಧಿತ ಶ್ರೀಕಾಂತ್ ವಿಚಾರಣೆ ವೇಳೆ ಕದ್ದ ಚಿನ್ನಾಭರಣವನ್ನು ಇವರು ಗಿರಿವಿಗೆ ಇಟ್ಟಿದ್ದರು ಎಂಬುದು ಕೂಡ ಗೊತ್ತಾಗಿದೆ. ಮತ್ತೋರ್ವ ಆರೋಪಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.



