ಬೆಂಗಳೂರು: ಅಪ್ರಾಪ್ತ ವಯಸ್ಸಿನಲ್ಲೇ 30ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪಡ್ಡೆ ಹುಡುಗರ ನಟೋರಿಯಸ್ ರಾಬರಿ ಗ್ಯಾಂಗ್ನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ಜುವೆನಿಲ್ ಹೌಸ್ನಿಂದ ಹೊರಬಂದ ಬಳಿಕ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಈ ಗ್ಯಾಂಗ್ನಿಂದ ಜನರಲ್ಲಿ ಭೀತಿ ಮೂಡಿತ್ತು.
ಬಂಧಿತ ಆರೋಪಿಗಳನ್ನು ಸುರೇಶ್ @ ಸೂರಿ, ಶಶಿಕುಮಾರ್ ಮತ್ತು ಅಕಿಲ್ @ ಕೋಜ ಎಂದು ಗುರುತಿಸಲಾಗಿದೆ. ಅಪ್ರಾಪ್ತ ವಯಸ್ಸಿನಲ್ಲಿದ್ದಾಗಲೇ ಹಲವಾರು ರಾಬರಿ ಪ್ರಕರಣಗಳಲ್ಲಿ ಬಂಧಿತರಾಗಿ ಜುವೆನಿಲ್ ಹೌಸ್ಗೆ ಕಳುಹಿಸಲ್ಪಟ್ಟಿದ್ದ ಆರೋಪಿಗಳು, ಮೇಜರ್ ಆದ ಬಳಿಕ ಮತ್ತೆ ಗ್ಯಾಂಗ್ ಕಟ್ಟಿಕೊಂಡು ಅಪರಾಧಗಳಲ್ಲಿ ತೊಡಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ಹೊಸ ವರ್ಷದ ಹಿಂದಿನ ದಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಚಾಕು ಚೂರಿ ತೋರಿಸಿ ಸುಮಾರು ಒಂದು ಲಕ್ಷ ರೂಪಾಯಿ ದರೋಡೆ ಮಾಡಲಾಗಿದೆ. ಹಣ ನೀಡದಿದ್ದರೆ ಚಾಕುವಿನಿಂದ ಹಲ್ಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಈ ಹಿಂದೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿ ಚಾಲಕನನ್ನು ಅಡ್ಡಗಟ್ಟಿ ಹಣ ಕೇಳಿ, ಹಣ ನೀಡದ ಹಿನ್ನೆಲೆಯಲ್ಲಿ ಕಾರಿನ ಗ್ಲಾಸ್ ಒಡೆದು ಚಾಕುವಿನಿಂದ ಇರಿತ ನಡೆಸಿದ್ದ ಆರೋಪವೂ ಈ ಗ್ಯಾಂಗ್ ಮೇಲೆ ಇದೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಜುವೆನಿಲ್ ಹೌಸ್ಗೆ ಕಳುಹಿಸಲಾಗಿತ್ತು.
ಆರೋಪಿಗಳು ಸೂರ್ಯ ಸಿಟಿ, ಮಾದನಾಯಕನಹಳ್ಳಿ, ಹೆಬ್ಬಗೋಡಿ, ಬ್ಯಾಡರಹಳ್ಳಿ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ಕನಿಷ್ಠ ಏಳು ಕಡೆಗಳಲ್ಲಿ ರಾತ್ರಿ ವೇಳೆ ರಾಬರಿ ನಡೆಸಿದ್ದಾರೆ. ಮಾದನಾಯಕನಹಳ್ಳಿಯಲ್ಲಿ ವಕೀಲನೊಬ್ಬರನ್ನು ಹಾಗೂ ಬ್ಯಾಡರಹಳ್ಳಿಯಲ್ಲಿ ಲಾರಿ ಚಾಲಕನನ್ನು ರಾಬರಿ ಮಾಡಿರುವ ಆರೋಪವಿದೆ.
ಇದರ ಜೊತೆಗೆ ಮಹದೇಶ್ವರ ಬೆಟ್ಟಕ್ಕೆ ಪ್ರವಾಸಕ್ಕೆ ತೆರಳಿದ್ದ ಪ್ರೇಮಿಗಳನ್ನೂ ರಾಬರಿ ಮಾಡಿದ್ದ ಆರೋಪ ಎದುರಿಸುತ್ತಿದ್ದಾರೆ.ಹೊಸ ವರ್ಷದ ರಾಬರಿ ಪ್ರಕರಣದ ತನಿಖೆ ನಡೆಸಿದ ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ನಟೋರಿಯಸ್ ರಾಬರಿಕೋರರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



