ಬೆಂಗಳೂರು: ನವೆಂಬರ್ ಕ್ರಾಂತಿ ಮತ್ತು ಸಿಎಂ ಕರೆದಿರುವ ಡಿನ್ನರ್ ಮೀಟಿಂಗ್‍ಗೆ ನಿಕಟ ಸಂಬಂಧವಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ವಿಶ್ಲೇಷಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
ಕಾಂಗ್ರೆಸ್ಸಿನಲ್ಲಿ ದೊಡ್ಡ ಬೆಳವಣಿಗೆ ನಡೆಯುತ್ತಿದೆ ಎಂಬುದು ಜನರ ಅನಿಸಿಕೆಯಾಗಿದೆ ಎಂದು ವಿವರಿಸಿದರು. ಮುಖ್ಯಮಂತ್ರಿಗಳೇ ಡಿನ್ನರ್ ಮೀಟಿಂಗ್ ಕರೆದಿದ್ದಾರೆ. ಕೆಲವು ಸಚಿವರು, ಬೇರೆ ಬೇರೆ ಸಭೆ ನಡೆಸುತ್ತಿದ್ದಾರೆ. ಇವೆಲ್ಲ ಕ್ರಾಂತಿಯ ಆಜುಬಾಜು ಓಡಾಡುವ ವಿಚಾರಗಳು. ಒಟ್ಟಾರೆ ಹೇಳುವುದಾದರೆ, ಡಿನ್ನರ್ ಮೀಟಿಂಗ್ ಎಂದರೆ ಅದೊಂದು ವಿಶೇಷತೆ.
ಎರಡೂವರೆ ವರ್ಷಗಳಲ್ಲಿ ಡಿನ್ನರ್ ಮೀಟಿಂಗ್ ಯಾವಾಗ ಆಗಿತ್ತು ಎಂದು ಪ್ರಶ್ನಿಸಿದರು.
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರದ ಅಂತ್ಯವೇ? ಡಿ.ಕೆ.ಶಿವಕುಮಾರರ ಗುಂಪು ಹೇಳುವ ರೀತಿಯಲ್ಲಿ ನವೆಂಬರ್‍ನಲ್ಲಿ ಶಿವಕುಮಾರರ ಮುಖ್ಯಮಂತ್ರಿ ಅಧಿಕಾರಾವಧಿ ಪ್ರಾರಂಭವೇ? ದಲಿತರನ್ನು ಮುಖ್ಯಮಂತ್ರಿ ವಿಚಾರದಲ್ಲಿ 75ಕ್ಕೂ ಹೆಚ್ಚು ವರ್ಷಗಳಿಂದ ವಂಚಿಸಿದ ಕಾಂಗ್ರೆಸ್ ಪಕ್ಷವು ಈಗಲಾದರೂ ದಲಿತ ಸಿಎಂ ವಿಚಾರಕ್ಕೆ ತೆರೆ ಎಳೆಯುವುದೇ? ಎಂದು ಕೇಳಿದರು.
ಮುಖ್ಯಮಂತ್ರಿಯಾಗಿ ಡಾ. ಪರಮೇಶ್ವರ್ ಅವರನ್ನು ಮಾಡುವ ವಿಚಾರ ನಿನ್ನೆಯಿಂದ ಹೊರಕ್ಕೆ ಬರುತ್ತಿದೆ. ಸಿದ್ದರಾಮಯ್ಯನವರ ಕಡೆಯವರು ಈ ಕುರಿತು ಮಾತನಾಡುತ್ತಿದ್ದು, ಸಿದ್ದರಾಮಯ್ಯನವರು ಡಾ. ಪರಮೇಶ್ವರ್ ಅವರನ್ನು ತರಬೇಕೆಂದು ಯೋಚಿಸಿದ್ದಾರಾ?- ಹೀಗೆ ಅನೇಕ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಬರುತ್ತಿದೆ ಎಂದು ತಿಳಿಸಿದರು.