ನರೇಗಲ್ಲ ಕಾಮಣ್ಣನಿಗೀಗ 320 ವರ್ಷ

0
kamanna utsava
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿಯ ಡಾ. ಕಾಳೆಯವರ ಆಸ್ಪತ್ರೆಯ ಹತ್ತಿರ ಪ್ರತಿಷ್ಠಾಪಿಸಲ್ಪಡುವ ಕಾಮಣ್ಣನಿಗೆ ಈಗ ಭರ್ತಿ 320 ವರ್ಷಗಳು! 320 ವರ್ಷಗಳ ಹಿಂದೆ ರೈಲು ಮೂಲಕ ನರೇಗಲ್ಲಿಗೆ ಬಂದ ಈ ರತಿ-ಕಾಮಣ್ಣರ ಮೂರ್ತಿಗಳನ್ನು ನರೇಗಲ್ಲದ ಹಿರಿಯರು ಹರ್ಲಾಪುರದ ರೈಲು ನಿಲ್ದಾಣದಿಂದ ಹೊರಸಿನ ಮೇಲೆ ನರೇಗಲ್ಲಿಗೆ ಕರೆತಂದರು ಎಂದು ಇಲ್ಲಿನ ಹಿರಿಯರು ನೆನಪಿಸಿಕೊಳ್ಳುತ್ತಾರೆ.

Advertisement

ಅಂದು ಅವರು ಯಾವ ಸಂಪ್ರದಾಯವನ್ನು ಹಾಕಿ ಹೋಗಿದ್ದಾರೆಯೋ ಅದರಂತೆಯೇ ಇಂದಿನ ಹಿರಿಯರು ಮತ್ತು ಯುವಕರು ಪ್ರತಿ 3 ವರ್ಷಕ್ಕೊಮ್ಮೆ ರತಿ-ಕಾಮಣ್ಣರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತ ಬಂದಿದ್ದಾರೆ.

ಈ ಕಾಮಣ್ಣನ ಪೂಜೆಯನ್ನು ಭಕ್ತಿಯಿಂದ ಮಾಡಿದರೆ ಅವನು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬ ನಂಬುಗೆ ಪಟ್ಟಣದ ಮತ್ತು ಸುತ್ತಲಿನ ಜನರಲ್ಲಿದೆ. ಅಲ್ಲದೆ ಬಹಳ ದಿನಗಳಿಂದ ಮಕ್ಕಳಾಗದ ದಂಪತಿಗಳು ಶ್ರದ್ಧೆಯಿಂದ ಈ ಕಾಮಣ್ಣನನ್ನು ಪೂಜಿಸಿದರೆ ಮಕ್ಕಳಾಗುತ್ತವೆ ಎಂಬ ನಂಬುಗೆಯೂ ಚಾಲ್ತಿಯಲ್ಲಿದ್ದು, ಇಲ್ಲಿನ ಹಿರಿಯರು ಅದನ್ನು ಅನುಮೋದಿಸುತ್ತಾರೆ. ಹೀಗೆ ಭಕ್ತರ ಕಾಮಧೇನುವಾಗಿರುವ ಈ ಕಾಮಣ್ಣ ಮಾ.21ರಿಂದ 25ರವರೆಗೆ ಭಕ್ತರಿಗೆ ದರುಶನಾಶೀರ್ವಾದ ನೀಡಲಿದ್ದಾನೆ.

ಮಾ.26ರಂದು ಬೆಳಿಗ್ಗೆ 7 ಗಂಟೆಗೆ ವಿಚಿತ್ರವಾದ ವೇಷಭೂಷಣ(ಸೋಗು) ಹಾಕಿಕೊಂಡು ಟ್ರ್ಯಾಕ್ಟರ್ ನಲ್ಲಿ ಬಣ್ಣ ತುಂಬಿದ ಪಾತ್ರೆಗಳನ್ನು ಇಟ್ಟುಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತ ಹೋಳಿ ಆಟವನ್ನು ಆಡಲಾಗುತ್ತದೆ. ಇಂಥ ವಿಶೇಷತೆ ಹೊಂದಿರುವ ಕಾಮಣ್ಣನನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ರತಿಷ್ಠಾಪಿಸಲಾಗುತ್ತದೆ. ರತಿ-ಕಾಮರ ಜತೆಗೆ ಇಲ್ಲಿ ಪರಮೇಶ್ವರ, ಋಷಿ ಮುನಿಗಳು, ರಾಜಾ, ಮನ್ಮಥ್, ರಾಣಿ, ಕೊರವ ಮತ್ತು ಮಂಗ ಎಂಬ ಇತರೆ ಹತ್ತು ಗೊಂಬೆಗಳನ್ನು ಕೂರಿಸಲಾಗುತ್ತಿದೆ. ಈ ಎಲ್ಲ ಗೊಂಬೆಗಳಿಗೆ 10ರಿಂದ 15 ವರ್ಷಗಳಿಗೊಮ್ಮೆ ಬಣ್ಣ ಹಚ್ಚಲಾಗುತ್ತದೆ. ಈ ಹಿಂದೆ ಉಡಿ ತುಂಬಿ ಸಂತಾನ ಭಾಗ್ಯ ಹೊಂದಿದ ತಾಯಂದಿರು ಕಾಮಣ್ಣನಿಗೆ ಸೀರೆ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುತ್ತಾರೆ.

bombegalu

ಇಲ್ಲಿನ ಹಿರಿಯರು ಮತ್ತು ಯುವಕರು 300 ವರ್ಷ ಕಳೆದರೂ ಯಾವುದೇ ಮೂರ್ತಿಗಳನ್ನು ಬದಲಾವಣೆ ಮಾಡಿಲ್ಲ. ಅವು ಮುಕ್ಕಾಗದಂತೆ ಕಾಪಾಡಿಕೊಂಡು ಬಂದಿದ್ದಾರೆ. ಈ ಹಿಂದೆ 2016ರಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಯಾಗಿತ್ತು. 2019ರಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಉತ್ಸವ ರದ್ದಾಗಿತ್ತು. ನಂತರ 2022ರಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಈಗ 3 ವರ್ಷಗಳ ನಂತರ ಮತ್ತೆ ಕಾಮಣ್ಣನ ಪ್ರತಿಷ್ಠಾಪನೆ ನಡೆಯುತ್ತಿದೆ. ಈ ಉತ್ಸವದ ಸಂದರ್ಭದಲ್ಲಿ ಮಾ. 24ರಂದು ರಸಮಂಜರಿ, ಮಾ.25ರಂದು ಗೀಗೀ ಪದಗಳ ಗಾಯನ ಜರುಗಲಿವೆ.

ನರೇಗಲ್ಲನ ಕಾಮಣ್ಣನಿಗೆ ಮದುವೆಯಾಗದವರು, ಮಕ್ಕಳಾಗದವರು ಸೇರಿದಂತೆ ಆರೋಗ್ಯ, ಸಂಪತ್ತು, ವಿದ್ಯೆ ಇತರೆ ಇಷ್ಟಾರ್ಥಗಳ ಬೇಡಿಕೆಗಳಿಗಾಗಿ ಕಾಮನ ಪಾದ, ಕಾಮನ ಹಸ್ತ, ಪಂಚಲೋಹದ ತೊಟ್ಟಿಲು, ಕಂಕಣಗಳನ್ನು ಪಡೆದುಕೊಂಡು ಹೋಗಿ ಮನೆಯಲ್ಲಿ ನಿತ್ಯ ಪೂಜೆ ಸಲ್ಲಿಸಲಾಗುತ್ತದೆ. ಇದರಿಂದ ಭಕ್ತಾದಿಗಳ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬ ಬಲವಾದ ನಂಬಿಕೆ ಇಲ್ಲಿನ ಭಕ್ತರಲ್ಲಿದೆ.

ನರೇಗಲ್ಲನ ಕಾಮಣ್ಣನ ಮೂರ್ತಿಗಳನ್ನು ಐದು ದಿನಗಳ ಕಾಲ ಕೂರಿಸಿ, ಸಾರ್ವಜನಿಕರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಈ ಮೂರ್ತಿಗಳಿಗೆ ಪ್ರತಿದಿನ ಎರಡು ಬಾರಿ ಪೂಜೆ ಸಲ್ಲಿಸಲಾಗುತ್ತದೆ. ಪಟ್ಟಣ ಸೇರಿದಂತೆ ಸುತ್ತಲಿನ ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ಮಲ್ಲಾಪೂರ, ದ್ಯಾಂಪೂರ, ಅಬ್ಬಿಗೇರಿ, ಜಕ್ಕಲಿ, ನಿಡಗುಂದಿ, ಮಾರನಬಸರಿ, ಬೂದಿಹಾಳ, ಮುಂತಾದ ಸುತ್ತಲಿನ ಗ್ರಾವiಗಳ ಜನರು ಜಾತಿ-ಧರ್ಮದ ಭೇದವಿಲ್ಲದೆ ಈ ಉತ್ಸವದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಾರೆ.

ನರೇಗಲ್ಲನ ಕಾಮಣ್ಣನಿಗೆ 320 ವರ್ಷಗಳ ಇತಿಹಾಸವಿದ್ದು, ಇಲ್ಲಿ ಭಕ್ತಿಯಿಂದ ಬೇಡಿಕೊಂಡು ದೇವರಿಗೆ ಉಡಿ ತುಂಬಿದರೆ, ಕಂಕಣ ಭಾಗ್ಯ, ಸಂತಾನ ಭಾಗ್ಯ ಸೇರಿದಂತೆ ಇತರೆ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಹೀಗಾಗಿ ಈ ಐದು ದಿನಗಳ ಕಾಲ ರತಿ-ಕಾಮಣ್ಣರಿಗೆ ಉಡಿ ತುಂಬಲು ದೊಡ್ಡ ಸಾಲೇ ನೆರೆದಿರುತ್ತದೆ. ನಮ್ಮ ಹಿರಿಯರು ನಡೆಸಿಕೊಂಡು ಬಂದ ಪದ್ಧತಿಯನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎನ್ನುತ್ತಾರೆ ಶಶಿಧರ ಸಂಕನಗೌಡ್ರ, ಉಮೇಶ ಕೊತಬಾಳ, ಗವಿಸಂಗಪ್ಪ ದಿಂಡೂರ, ಮೈಲಾರಪ್ಪ ಗೋಡಿ, ಶೇಖಪ್ಪ ಜುಟ್ಲ, ಸುರೇಶ ಹುನಗುಂದ ಮತ್ತು ನರೇಗಲ್ಲ ಕಾಮಣ್ಣನ ಉತ್ಸವ ಸಮಿತಿ ಸದಸ್ಯರು.


Spread the love

LEAVE A REPLY

Please enter your comment!
Please enter your name here