ಬೆಂಗಳೂರು: ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್ಸಿ ಬಾಲಕೃಷ್ಣ ವಿರುದ್ಧ 1600 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಾಗ ಕಬಳಿಕೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಕೆಂಗೇರಿಯ ಸರ್ವೇ ನಂಬರ್ 69ರಲ್ಲಿ ಒಟ್ಟು 183 ಎಕರೆ ವಿಸ್ತೀರ್ಣದ ಸರ್ಕಾರಿ ಸ್ವತ್ತು ಇತ್ತು, ಈ ಪೈಕಿ 37.20 ಎಕರೆಯನ್ನು 1973ರಲ್ಲಿ 25 ಜಮೀನುರಹಿತರಿಗೆ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದವರಿಗೆ ಪ್ರತಿ ವ್ಯಕ್ತಿಗೂ 1.20 ಎಕರೆ ಹಂಚಿಕೆಯಾಗಿತ್ತು. ಉತ್ತರಹಳ್ಳಿ-ಕೆಂಗೇರಿ ನಡು ಭಾಗದಲ್ಲಿ ಇರುವ ಈ ಜಾಗದ ಹಲವು ಫಲಾನುಭವಿಗಳು ಮೃತಪಟ್ಟಿದ್ದಾರೆ.
ಮತ್ತೊಂದೆಡೆ ಸರ್ಕಾರದ ಅನುಮತಿಯಿಲ್ಲದೆ ಈ ಜಾಗವನ್ನು ಮಾರಾಟ ಮಾಡಿರುವ ಬಗ್ಗೆ ಹಲವು ಆರೋಪಗಳು ಕೇಳಿ ಬಂದಿವೆ. ಸುರೇಂದ್ರ ಎಂಬ ವ್ಯಕ್ತಿ ಮಾರಾಟಕ್ಕೆ ಸಂಚು ಹೂಡಿದ್ದರು ಎಂದು ಆರೋಪಿಸಲಾಗಿದೆ. ಸುರೇಂದ್ರ ಕೆಎಸ್ಎಸ್ ರೆಸಿಡೆನ್ಸಿ ಕಂಪನಿಯ ಮಾಲೀಕರಾಗಿದ್ದು, ಎಚ್ಸಿ ಬಾಲಕೃಷ್ಣ ಮತ್ತು ಕೆಲ ಪ್ರಭಾವಿಗಳ ಸಹಕಾರದಿಂದ ಮಾರಾಟಕ್ಕೆ ಮಾಡಿದ್ದಾರೆ ಎಂಬ ಆರೋಪಗಳಿವೆ.
69 ರ 183 ಎಕರೆ ಸರ್ಕಾರಿ ಸ್ವತ್ತು ಸಂಪೂರ್ಣವಾಗಿ ‘‘ಸರ್ಕಾರಿ ಬಂಡೆ’’ ಪ್ರದೇಶವಾಗಿದ್ದು, ಇದನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲು ಕಾನೂನು ರೀತ್ಯಾ ಅವಕಾಶವೇ ಇಲ್ಲ. ಹೀಗಿದ್ದರೂ, ಕೆಎನ್ ಸುರೇಂದ್ರ ಅವರ ಬೆನ್ನಿಗಿದ್ದ ಪ್ರಭಾವಿಗಳ ಒತ್ತಡಗಳಿಗೆ ಒಳಗಾಗಿದ್ದ ಕಂದಾಯ ಇಲಾಖೆಯ ಬೆಂಗಳೂರು ದಕ್ಷಿಣ ತಾಲೂಕಿನ ಎಲ್ಲಾ ಅಧಿಕಾರಿಗಳು ಕಾನೂನು ಬಾಹಿರ ಕಾರ್ಯಗಳನ್ನು ಮಾಡುತ್ತಾ ನಕಲಿ ದಾಖಲೆಗಳ ತಯಾರಿಕೆಗೆ ಅವಕಾಶ ಮಾಡಿಕೊಟ್ಟು, 1,600 ಕೋಟಿ ರೂ. ಮೌಲ್ಯದ ಸರ್ಕಾರಿ ಭೂ ಕಬಳಿಕೆಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ಎನ್ ಅರ್ ರಮೇಶ್ ಅರೋಪ ಮಾಡಿ ದಾಖಲೆ ಸಮೇತ ಲೋಕಯುಕ್ತಗೆ ದೂರು ಸಲ್ಲಿಸಿ ತನಿಖೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.