ವಿಶೇಷಚೇತನರ ಜೀವನಕ್ಕೆ ನರೇಗಾ ಆಸರೆ

0
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ರಕ್ತ ಸಂಬಂಧಿಕರಲ್ಲಿ ಮದುವೆಯಾದ ಕಾರಣದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ದೈಹಿಕವಾಗಿ ನ್ಯೂನತೆ ಹೊಂದಿರುವವರು ಸಮಾಜದಲ್ಲಿ ಸಾಮಾನ್ಯರಂತೆ ಜೀವನ ನಡೆಸುವುದು ಕಷ್ಟ. ದೈಹಿಕವಾಗಿ ನ್ಯೂನತೆ ಹೊಂದಿರುವವರನ್ನು ಕರೆದು ಕೆಲಸ ಕೊಡುವುದಕ್ಕಿಂತ ಅವರಿಂದ ಏನು ಕೆಲಸ ಮಾಡಲು ಸಾಧ್ಯ ಎಂಬ ಪ್ರಶ್ನೆಗಳನ್ನು ಕೇಳುವವರೇ ಹೆಚ್ಚು. ಹೀಗಿರುವಾಗ ದೈಹಿಕವಾಗಿ ಮತ್ತು ಮಾನಸಿಕವಾಗಿ ನ್ಯೂನತೆ ಹೊಂದಿರುವವರು ಗಜೇಂದ್ರಗಡ ತಾಲೂಕಿನಲ್ಲಿ ಶುರುವಾಗಿರುವ ನರೇಗಾ ಸಮುದಾಯ ಕಾಮಗಾರಿಗಳಲ್ಲಿ ಸಮಾನ್ಯರಂತೆ ಕೆಲಸ ಮಾಡುವುದರ ಮೂಲಕ ತಮ್ಮ ದೈಹಿಕ ನ್ಯೂನತೆಗೆ ಸವಾಲೆಸದಿದ್ದಾರೆ.

Advertisement

ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಇದ್ದೂರಲ್ಲೇ ಕೆಲಸ ದೊರೆಯಲಿ ಎಂದು ನರೇಗಾ ಸಮುದಾಯ ಕಾಮಗಾರಿಗಳಲ್ಲಿ ಕೆಲಸ ಆರಂಭವಾಗಿದೆ. ಗಂಡು-ಹೆಣ್ಣಿಗೆ ಸರಿಸಮಾನವಾಗಿ ಕೂಲಿಮೊತ್ತ ನೀಡುವ ನರೇಗಾ ಯೋಜನೆಯು ವಿಶೇಷ ಚೇತನರಿಗೆ ಮತ್ತು ಅಂಗವಿಕಲರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯತಿ ನೀಡುವುದರ ಮೂಲಕ ಅವರ ಸ್ವಾವಲಂಬನೆ ಜೀವನಕ್ಕೆ ಮುತುವರ್ಜಿ ವಹಿಸಿದೆ.

ತಾಲೂಕಿನ ಗುಳಗುಳಿ ಗ್ರಾ.ಪಂ ವ್ಯಾಪ್ತಿಯ ಹಿರೇಅಳಗುಂಡಿ ಗ್ರಾಮದ 24 ವರ್ಷದ ಸುಮ್ಮವ್ವ ಬಾಲನ್ನವರ ಮತ್ತು 22 ವರ್ಷದ ಬಸವ್ವ ಬಾಲನ್ನವರ ಎಂಬ ಬುದ್ಧಿಮಾಂದ್ಯ ಸಹೋದರಿಯರಿಬ್ಬರಿಗೆ ನರೇಗಾ ಸಮುದಾಯ ಕೆಲಸ ಜೀವನ ಕಟ್ಟಿಕೊಟ್ಟಿದೆ. ಸರಿಯಾಗಿ ಮಾತು ಬರದ ಮತ್ತು ದೈಹಿಕವಾಗಿ ನ್ಯೂನತೆ ಹೊಂದಿರುವ ಈ ಇಬ್ಬರು ಬುದ್ಧಿಮಾಂದ್ಯ ಸಹೋದರಿಯರು ಪಾಲಕರ ನೆರವಿನಿಂದ ಕೆಲಸ ಮಾಡುತ್ತಿದ್ದಾರೆ.

ತಂದೆ ರಂಗಪ್ಪ ಬಾಲನ್ನವರ ಯೋಜನೆಯಡಿ ಬದು ನಿರ್ಮಾಣ ಕೆಲಸದಲ್ಲಿ ಅಗೆಯುವ ಮಣ್ಣನ್ನು ಬುದ್ದಿಮಾಂಧ್ಯ ಸಹೋದರಿಯರು ಪರಸ್ಪರ ಸಹಕಾರದಿಂದ ಮಣ್ಣನ್ನು ಬುಟ್ಟಿಗೆ ತುಂಬಿ ಹೊಲದ ಬದುವಿಗೆ ಒಡ್ಡು ಹಾಕುವ ಕೆಲಸ ಮಾಡುತ್ತಾರೆ. ತಾಯಿ ಲಲಿತವ್ವ ಬಾಲನ್ನವರ ಮನೆಕೆಲಸ ಮಾಡಿಕೊಂಡು ಇಬ್ಬರು ಮಕ್ಕಳನ್ನು ಸಾಕುತ್ತಿದ್ದಾಳೆ. ಬಡ ಕುಟುಂಬದಲ್ಲಿರುವ ಬಾಲನ್ನವರ ದಂಪತಿಗಳಿಗೆ ನರೇಗಾ ಕೆಲಸವೇ ಜೀವನಕ್ಕೆ ಆಧಾರ.

ತಾಲೂಕಿನ ಗೋಗೇರಿ ಗ್ರಾ.ಪಂ ವ್ಯಾಪ್ತಿಯ 45 ವರ್ಷದ ಬಸಮ್ಮ ಕೆರಿ ಬುದ್ಧಿಮಾಂದ್ಯಳಾಗಿದ್ದರೆ, 38 ವರ್ಷದ ಅಂದಪ್ಪ ಕೆರಿ ಕಾಲನ್ನು ಕಳೆದುಕೊಂಡಿದ್ದಾನೆ. ಇಬ್ಬರೂ ಬೇಸಿಗೆ ಅವಧಿಯಲ್ಲಿ ಕನಿಷ್ಠ 60 ದಿನಗಳ ಕಾಲ ದುಡಿದರೆ 22 ಸಾವಿರ ರೂ ಕೂಲಿ ಮೊತ್ತ ಬರುವ ಕಾರಣದಿಂದ ದೈಹಿಕ ನ್ಯೂನತೆ ಹೊಂದಿದ್ದರೂ ನರೇಗಾದ ಸಮುದಾಯ ಕೆಲಸದಲ್ಲಿ ದುಡಿದು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ.

ನರೇಗಾ ಯೋಜನೆಯಲ್ಲಿ ವಿಶೇಷ ಚೇತನರಿಗೆ, ಹಿರಿಯ ನಾಗರೀಕರಿಗೆ, ಅಂಗವಿಕಲರಿಗೆ ರಿಯಾಯತಿ ಕೆಲಸ ನೀಡಲಾಗುವುದು. ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ವಿಶೇಷ ಚೇತನರಿಗೆ ಇರುವ ಕೆಲಸದ ರಿಯಾಯತಿ ಬಗ್ಗೆ ಐಇಸಿ ಚಟುವಟಿಕೆ ಮೂಲಕ ಪ್ರಚಾರ ಮಾಡಲಾಗಿದೆ. ಹೀಗಾಗಿ ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ವಿಶೇಷ ಚೇತನರು ನರೇಗಾ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ಮಂಜುಳಾ ಹಕಾರಿ.

ಕಾರ್ಯನಿರ್ವಾಹಕ ಅಧಿಕಾರಿಗಳು,

ತಾ.ಪಂ, ಗಜೇಂದ್ರಗಡ.

“ದೈಹಿಕ ನ್ಯೂನತೆ ಹೊಂದಿದ್ದರೂ ಯೋಜನೆಯಡಿ ಕೆಲಸ ಮಾಡುವ ಆಸಕ್ತಿ ಈ ನಾಲ್ವರಿಗೆ ಬಂದಿರುವುದು ಒಳ್ಳೆಯದು. ಇವರಷ್ಟೇ ಅಲ್ಲದೆ ಬೇರೆ ಯಾರಾದರೂ ವಿಶೇಷ ಚೇತನರು ತಾಲೂಕಿನ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿದ್ದರೆ ಅವರು ಕೂಡಾ ನರೇಗಾ ಕೆಲಸಕ್ಕೆ ಬರಬಹುದು. ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಬೇಸಿಗೆ ಅವಧಿಯಲ್ಲಿ ಸಮುದಾಯ ಕೆಲಸದಲ್ಲಿ ಭಾಗವಹಿಸಿ”

– ಬಸವರಾಜ ಬಡಿಗೇರ.

ಸಹಾಯಕ ನಿರ್ದೇಶಕರು(ಗ್ರಾ.ಉ),

ತಾ.ಪಂ ಗಜೇಂದ್ರಗಡ.


Spread the love

LEAVE A REPLY

Please enter your comment!
Please enter your name here