ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುತ್ತಿರುವ ನರೇಗಾ ಸಿಬ್ಬಂದಿಗಳಿಗೆ ಕಳೆದ 6-7 ತಿಂಗಳ ವೇತನ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ತಾಲೂಕಿನ ನರೇಗಾ ಸಿಬ್ಬಂದಿಗಳು ಶನಿವಾರ ತಾ.ಪಂ ಇ.ಓ ಕೃಷ್ಣಪ್ಪ ಧರ್ಮರ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಫಕ್ಕೀರೇಶ ಮತ್ತು ಮಂಜುನಾಥ ತಳವಾರ ಮಾತನಾಡಿ, ತಾಲೂಕಿನಲ್ಲಿ ಜಿ.ಪಂ ಮತ್ತು ತಾ.ಪಂ ಮಟ್ಟದಲ್ಲಿ ವಿವಿಧ ಸ್ಥರಗಳಲ್ಲಿ ನರೇಗಾ ಯೋಜನೆಯಡಿ ವಿವಿಧ ಹುದ್ದೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಎಲ್ಲ ಸಿಬ್ಬಂದಿಗಳಿಗೆ ಕಳೆದ ಜನವರಿ-2025ರ ಮಾಹೆಯಿಂದ ಇಲ್ಲಿಯವರೆಗೆ ವೇತನ ಪಾವತಿಯಾಗಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಬರುವ ತಿಂಗಳಲ್ಲಿ ವೇತನ ಪಾವತಿಯಾಗದೇ ಇದ್ದಲ್ಲಿ ನೌಕರರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಕುಸಿಯಲಿದೆ. ಕೂಡಲೇ ಸಿಬ್ಬಂದಿಗಳ ಸಂಬಳಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಇನ್ನು ಎರಡು ದಿನಗಳಲ್ಲಿ ವೇತನ ವಾವತಿಯಾಗದಿದ್ದರೆ ಜುಲೈ 7ರಿಂದ ವೇತನ ಪಾವತಿಯಾಗುವವರೆಗೂ ಅಸಹಕಾರ ಚಳುವಳಿ ಮಾಡಬೇಕೆಂದು ಉಲ್ಲೇಖಿತ ರಾಜ್ಯ ಸಂಘದ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್.ಕೆ. ಕರನಗೌಡ್ರು, ಎಂ.ಎಚ್. ಪಾಟೀಲ್, ಎಸ್.ಎಸ್. ಪಾಟೀಲ್, ಎಸ್.ವಿ. ಕುಲಕರ್ಣಿ, ಹರೀಶ, ಭಾರತಿ, ಶಿಲ್ಪಾ ಲಮಾಣಿ, ಗಂಗಮ್ಮ ಹರಿಜನ, ಶಿವಕ್ಕ ಮಾದರ, ಪರಮೇಶ ಲಮಾಣಿ, ವಿನೋದಕುಮಾರ ಲಮಾಣಿ, ಗೌರಮ್ಮ ಲಮಾಣಿ, ಭೀಮಪ್ಪ ರಾಠೋಡ ಮಂಜುಳಾ ಕಟ್ಟಿಮನಿ ಇದ್ದರು. ಮನವಿ ಸ್ವೀಕರಿಸಿದ ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಈ ಕುರಿತು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸುವದಾಗಿ ಹೇಳಿದರು.