ವಿಜಯಸಾಕ್ಷಿ ಸುದ್ದಿ, ಗದಗ : ಗದಗ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿದ ಕಾಮಗಾರಿಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ವೀಕ್ಷಣೆ ಮಾಡಿದರು.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಕೈಗೊಂಡಿರುವ ಸಿಸಿ ಚರಂಡಿ ಕಾಮಗಾರಿ ವೀಕ್ಷಣೆ ನಡೆಸಿ, ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಿದರು. ಬಳಿಕ ಹಾತಲಗೇರಿ ಗ್ರಾ.ಪಂ ವ್ಯಾಪ್ತಿಯ ಸಂಭಾಪೂರ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿ ವೀಕ್ಷಿಸಿದರು.
ತಾಲೂಕಿನ ವಿವಿಧ ಗ್ರಾ.ಪಂ ವ್ಯಾಪ್ತಿಯಲ್ಲಿಯ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಲಾದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ ವೀಕ್ಷಣೆ ಮಾಡಿ, ಕಾಮಗಾರಿ ಕಡತ, ಗುಣಮಟ್ಟ, ಅಳತೆ ಪರಿಶೀಲನೆ ಮಾಡಿದರು. ಗ್ರಾ.ಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ನಿರ್ಮಾಣವಾಗುವ ಸಿಸಿ ರಸ್ತೆಗಳು, ಚರಂಡಿ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಗುಣಮಟ್ಟದಲ್ಲಿ ಯಾವುದೇ ರೀತಿಯ ಲೋಪವಾಗದಂತೆ ನಿಗಾ ವಹಿಸುವ ಮೂಲಕ ಕಾಮಗಾರಿಯ ಲಾಭ ಗ್ರಾಮದ ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ (ಗ್ರಾ.ಉ), ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಸಹಾಯಕ ಸಮನ್ವಯ ಸಂಯೋಜಕ, ತಾಂತ್ರಿಕ ಸಂಯೋಜಕ, ತಾಂತ್ರಿಕ ಸಹಾಯಕರು, ಬಿ.ಎಫ್.ಟಿಗಳು, ಜಿ.ಕೆ.ಎಮ್‌ಗಳು ಹಾಗೂ ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.