HomeGadag Newsವೈವಿಧ್ಯತೆಗೆ ಸಾಕ್ಷಿಯಾದ ನರೇಗಾ ಕಾಮಗಾರಿ ಸ್ಥಳ: ಉದ್ಯೋಗ ಖಾತ್ರಿ ಸ್ಥಳದಲ್ಲಿ ಮೋಜಿನ ಆಟಗಳು

ವೈವಿಧ್ಯತೆಗೆ ಸಾಕ್ಷಿಯಾದ ನರೇಗಾ ಕಾಮಗಾರಿ ಸ್ಥಳ: ಉದ್ಯೋಗ ಖಾತ್ರಿ ಸ್ಥಳದಲ್ಲಿ ಮೋಜಿನ ಆಟಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ರೋಣ: ನರೇಗಾ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರೆ ಸಾಕು, ಸಾಮಾನ್ಯವಾಗಿ ಕೂಲಿ ಕಾರ್ಮಿಕರು ಸಲಿಕೆ, ಗುದ್ದಲಿ ಹಿಡಿದುಕೊಂಡು ಕೆಲಸ ಮಾಡುವುದನ್ನು ಕಾಣುತ್ತೇವೆ. ಆದರೆ ಅದೇ ನರೇಗಾ ಸ್ಥಳವು ಈಗ ಮನರಂಜನೆಯ ತಾಣವಾಗಿ ಮಾರ್ಪಟ್ಟಿದೆ ಅಂದರೆ ನಂಬಲೇಬೇಕು!

ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸಾಮೂಹಿಕ ಕಾಮಗಾರಿ ಆರಂಭವಾಗಿದೆ. ಈ ಸ್ಥಳದಲ್ಲಿ ಬರಿಯ ಸಾಂಪ್ರದಾಯಿಕ ಆಟಗಳದ್ದೇ ಮೆರುಗು. ಕಬ್ಬಡ್ಡಿ, ಖೋಖೊ, ಸೋಬಾನೆ ಪದ, ಕಣ್ಣ ಮುಚ್ಚಾಲೆ ಸೇರಿದಂತೆ ಹಲವು ಆಟಗಳನ್ನು ಆಡಿ ಕೂಲಿ ಕಾರ್ಮಿಕರು ಖುಷಿ ಪಡುತ್ತಿದ್ದಾರೆ. ಇದು ಅಬ್ಬಿಗೇರಿ ಗ್ರಾಮ ಪಂಚಾಯಿತಿಗಷ್ಟೇ ಸೀಮಿತವಾಗದೆ, ತಾಲೂಕಿನ ಸವಡಿ, ಜಕ್ಕಲಿ, ಕುರುಡಗಿ ಹೀಗೆ ಹಲವಾರು ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ಆಟವಾಡುವ ಮೂಲಕ ಕೆಲಸ ಮಾಡುವದು ಸಾಮಾನ್ಯವಾಗಿದೆ.

ಕಾಮಗಾರಿ ವೇಳೆ ಕೆಲಸ ಮಾಡುತ್ತಾರೆ, ಬಿಡುವಿನ ಸಮಯದಲ್ಲಿ ಪುರುಷ ಕಾರ್ಮಿಕರು ಅತ್ಯಂತ ಉತ್ಸಾಹದಿಂದ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡು ಕಬಡ್ಡಿ, ಖೋಖೋ ಆಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ಮಹಿಳೆಯರು ಸಹ ಖೋಖೋ ಆಟದಲ್ಲಿ ಭಾಗಿಯಾಗುತ್ತಿದ್ದಾರೆ. ಜೊತೆಗೆ ಸೋಬಾನೆ ಪದಗಳನ್ನು ಸಾಮೂಹಿಕವಾಗಿ ಹಾಡುತ್ತಾ ಜನಪದ ಸಂಸ್ಕೃತಿಯನ್ನು ಮೆರೆಯುತ್ತಿದ್ದಾರೆ. ಇಂಥ ಆಟಗಳು ಮತ್ತು ಜನಪದ ಗೀತೆಗಳ ಗಾಯನ, ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಕಾರ್ಮಿಕರು ಕೆಲಸದ ದಣಿವಾರಸಿಕೊಳ್ಳಲು ಸಹಾಯವಾಗುತ್ತಿದೆ.

ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಇದರಿಂದ ವಿಶಿಷ್ಠ ವಾತಾವರಣ ನಿರ್ಮಾಣವಾಗಿದ್ದು, ಜನರು ಉದ್ಯೋಗ ಖಾತ್ರಿ ಕೆಲಸದತ್ತ ಹೆಚ್ಚು ಆಕರ್ಷಿತರಾಗುವಂತೆ ಮಾಡಿದೆ. ‘ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ’ ಎಂಬ ಉಕ್ತಿಯಂತೆ ಉದ್ಯೋಗ ಖಾತ್ರಿ ಸ್ಥಳ ಸಮಾನತೆಯ ತತ್ವವನ್ನು ಸಾರುತ್ತಿದೆ. ಅಲ್ಲದೆ ಗ್ರಾಮೀಣ ಜನರಲ್ಲಿ ಕೆಲಸದ ಬಗ್ಗೆ ಹೆಮ್ಮೆ, ವಿಶ್ವಾಸ ಇಮ್ಮಡಿಗೊಳಿಸಿದೆ.

“ನಾವು ಒಡ್ಡು ಹಾಕಿದ ಮೇಲೆ ಇನ್ನೂ ಸಮಯ ಇರುತ್ತೆ. ಮನೆಯೊಳಗ ಅತ್ತಿ-ಮಾವ, ಬಂಧು-ಬಳಗ ಇರುತ್ತ. ಅಲ್ಲಿ ಸಣ್ಣ ಹುಡುಗರ ಹಂಗ ಆಟ ಆಡಿದರೆ ಸರಿ ಅನಸಲ್ಲಾ, ಇಲ್ಲಿ ಹೊಲದಾಗ ನಮ್ಮ ಯಜಮಾನರು ಇರ್ತಾರ ಮತ್ತ ನಮ್ಮ ಗೆಳೆತ್ಯಾರ ಇರ್ತಾರ, ನಡೆಯುತ್ತ. ಮನಸ್ಸು ಬಿಚ್ಚಿ ಆಟ ಆಡ್ತಿವಿ, ಇದು ಬಾಳ ಖುಷಿ ಕೊಡ್ತದ”

ರೇಣುಕಾ ರಾಮಣ್ಣವರ.

ನರೇಗಾ ಕೂಲಿ ಕಾರ್ಮಿಕರು, ಅಬ್ಬಿಗೇರಿ.

“ಗ್ರಾಮೀಣ ಕ್ರೀಡೆಗಳು ಇತ್ತಿಚೀನ ದಿನಗಳಲ್ಲಿ ಮೂಲೆಗುಂಪಾಗುತ್ತಿವೆ. ಗ್ರಾಮೀಣರಿಗೆ ಆಸಕ್ತಿ ಇದ್ದರೂ ಅವಕಾಶ ಇಲ್ಲದ ಕಾರಣ ಅಸಹಾಯಕರಾಗಿದ್ದಾರೆ. ದೈಹಿಕ ಶ್ರಮದ ಜೊತೆಗೆ ಗ್ರಾಮೀಣ ಸಂಪ್ರದಾಯಗಳನ್ನು ಒಟ್ಟುಗೂಡಿಸಿ ಒಂದು ಸೌಹಾರ್ದಯುತ ವಾತಾವರಣ ಸೃಷ್ಟಿ ಮಾಡುವುದು ಹಾಗೂ ಕೂಲಿಗೆ ಬಂದಾಗಲೂ ಸಹ ಖುಷಿಯಿಂದ ಇರುವ ಮಾರ್ಗವನ್ನು ಕೂಲಿ ಕಾರ್ಮಿಕರು ಕಂಡುಕೊಂಡಿದ್ದಾರೆ. ಇಂತಹ ಬೆಳವಣಿಗೆಗೆ ಕಾರಣವಾದ ಕಾರ್ಮಿಕರಿಗೆ ನನ್ನ ಕೃತಜ್ಞತೆಗಳು”

ಚಂದ್ರಶೇಖರ ಬಿ.ಕಂದಕೂರ.

ಕಾರ್ಯ ನಿರ್ವಾಹಕ ಅಧಿಕಾರಿಗಳು, ರೋಣ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!