ಕೊಡಗು:ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು, ಶಾಸಕರಾದ ಡಾ.ಮಂತರ್ ಗೌಡ ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಳೆ ಹಾನಿ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿ ವೀಕ್ಷಿಸಿದರು. ಮುಕ್ಕೊಡ್ಲು, ಐಗೂರು, ಮಲ್ಲಳ್ಳಿ ಜಲಪಾತ ಬಳಿ ಸೇತುವೆ ಹೀಗೆ ಮಳೆಹಾನಿ ಪ್ರದೇಶ ಹಾಗೂ ಮದಾಪುರ ಬಳಿಯ ಜಂಬೂರು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಜನರ ಕುಂದುಕೊರತೆ ಆಲಿಸಿದರು.
ಬಳಿಕ ಸೋಮವಾರಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಪ್ರಾಕೃತಿಕ ವಿಕೋಪ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.
ಮನೆ, ರಸ್ತೆ, ಸೇತುವೆ, ತಡೆಗೋಡೆ, ವಿದ್ಯುತ್ ಕಂಬ ಹಾಗೂ ಪರಿವರ್ತಕಗಳು, ಬೆಳೆ ಹಾನಿ ಹೀಗೆ ಮಳೆಯಿಂದ ವಿವಿಧ ರೀತಿಯ ಹಾನಿಯಾಗಿದ್ದು, ಈ ಸಂಬಂಧ ನಷ್ಟದ ಅಂದಾಜು ಮಾಡಿ ಮುಖ್ಯಮಂತ್ರಿ ಅವರು ಹಾಗೂ ಕಂದಾಯ ಸಚಿವರಿಗೆ ವರದಿ ನೀಡಿ, ವಿಶೇಷ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದರು.