ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮಾಜಕ್ಕೆ ಸೇವೆ ಸಲ್ಲಿಸಬಯಸುವವರಿಗೆ ಎನ್‌ಎಸ್‌ಎಸ್ ಒಂದು ಉತ್ತಮ ವೇದಿಕೆಯಾಗಿದೆ. ಈ ವಾರ್ಷಿಕ ಶಿಬಿರದಲ್ಲಿ ಕಲಿತ ಮಹತ್ವದ ಅಂಶಗಳನ್ನು ನೀವು ಜೀವನದಲ್ಲಿ ಅಳವಡಿಸಿಕೊಂಡರೆ ಮುಂದೊಂದು ದಿನ ನೀವು ಉತ್ತಮ ಸಮಾಜ ಸೇವಕರಾಗುತ್ತೀರಿ ಎಂದು ನರೇಗಲ್ಲ ಸರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಎಸ್.ಎಲ್. ಗುಳೇದಗುಡ್ಡ ಹೇಳಿದರು.
ಕೋಟುಮಚಗಿಯಲ್ಲಿ ನರೇಗಲ್ಲದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರಕಾರಿ ಪದವಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ವಿಶೇಷ ಶಿಬಿರದ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ದಿಸೆಯಿಂದಲೇ ಸಮಾಜದ ಸೇವೆಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ತರಬೇತಿ ನೀಡುವುದರಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಯಾವಾಗಲೂ ಮುಂದಿದೆ. ಇದರಿಂದ ತರಬೇತಿ ಪಡೆದ ಅದೆಷ್ಟೋ ಜನರು ಈಗ ಸಮಾಜ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೀವೂ ಸಹ ನಿಮ್ಮನ್ನು ಸಿದ್ಧಪಡಿಸಿಕೊಂಡು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಿ. ಆ ಸಮಯದಲ್ಲಿ ಇಲ್ಲಿ ಪಡೆದ ತರಬೇತಿಯನ್ನು ನೀವು ಸ್ಮರಿಸಿಕೊಳ್ಳಿರಿ ಎಂದು ಹೇಳಿದರು.
ಸಾವಯವ ಕೃಷಿಕ ವೀರೇಶ ನೇಗಲಿ ಮಾತನಾಡಿ, ಈಗಿನಿಂದಲೇ ಕೃಷಿಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಿ. ಸಾವಯವ ಕೃಷಿಗೆ ಹೆಚ್ಚು ಮಹತ್ವ ನೀಡಿ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ಈ ವಿಷಯವನ್ನು ನಿಮ್ಮೂರಿನ ರೈತರಿಗೂ ತಿಳಿಸಿ, ಅವರಿಗೆ ರಾಸಾಯನಿಕ ಗೊಬ್ಬರದಿಂದ ದೂರ ಇರುವಂತೆ ಜಾಗೃತಿ ಮೂಡಿಸಿ ಎಂದರು.
ಶಿಬಿರದ ಸಂಯೋಜನಾಧಿಕಾರಿ ಸುನಂದಾ ಮುಂಜಿ ವರದಿ ವಾಚಿಸಿದರು. ಶಿಬಿರಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ಜರುಗಿದವು.



