ಬೆಂಗಳೂರು: ಇತ್ತೀಚೆಗೆ ಕರ್ನಾಟಕದಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, 2023ರಲ್ಲಿ ದಾಖಲಾಗಿದ್ದ 22,225 ಪ್ರಕರಣಗಳು 2025 ರ ವೇಳೆಗೆ 14,899ಕ್ಕೆ ಇಳಿಕೆಯಾಗಿವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ಕೈಗೊಂಡ ಪರಿಣಾಮಕಾರಿ ಕ್ರಮಗಳು, ಪ್ರಕರಣಗಳ ತ್ವರಿತ ಪತ್ತೆ ಮತ್ತು ಸಾರ್ವಜನಿಕರಲ್ಲಿ ಮೂಡಿಸಿದ ಜಾಗೃತಿ ಇದರ ಪ್ರಮುಖ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೂ, ಸೈಬರ್ ಖದೀಮರು ತಮ್ಮ ವಂಚನೆ ಕಾರ್ಯವನ್ನು ಇನ್ನೂ ತಂತ್ರಜ್ಞಾನದ ಹೊಸ ಮಾರ್ಗಗಳಲ್ಲಿ ಮುಂದುವರೆಸುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಘಟನೆ ಇದರ ತಾಜಾ ಉದಾಹರಣೆಯಾಗಿದೆ. ಮಹಿಳೆಯೊಬ್ಬರಿಗೆ ನಯನಾ ಪ್ರಕಾಶ್ ಎಂಬ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಕರೆಮಾಡಿದ ಖದೀಮರು, ಮೊದಲು ಆಡಿಯೋ ಕಾಲ್ ಮೂಲಕ “ನಿಮ್ಮ ತಾಯಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ” ಎಂದು ಭಯಪಟ್ಟು ಹೇಳಿದರು. ನಂತರ ಕರೆಯನ್ನು ವಿಡಿಯೋ ಕಾಲ್‌ಗೆ ಪರಿವರ್ತಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಅವರ ಧೈರ್ಯ ಎಷ್ಟೆಂದರೆ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ನಕಲಿ ಸೀಲ್ ಮತ್ತು ಸಹಿ, ಕರ್ನಾಟಕ ಸಿಐಡಿ ಹೆಸರಲ್ಲಿ ಅರೆಸ್ಟ್ ವಾರಂಟ್, ಹಾಗೂ ಸುಪ್ರೀಂ ಕೋರ್ಟ್ ಆದೇಶ ಎನ್ನುವ ನಕಲಿ ದಾಖಲೆಗಳನ್ನು ಸಹ ಬಳಸಿದರು. ಮಹಿಳೆಯು ದಾಖಲೆಗಳನ್ನು ಪರಿಶೀಲಿಸಿ ಅನುಮಾನಗೊಂಡು ಎಚ್ಚೆತ್ತುಕೊಂಡರು ಮತ್ತು ತಕ್ಷಣ ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಅಧಿಕೃತ ಮೇಲ್ ಐಡಿಗೆ ಹಾಗೂ ಸೈಬರ್ ಕ್ರೈಂ ಪೋರ್ಟಲ್‌ನಲ್ಲಿ ದೂರು ದಾಖಲಿಸಿದರು.
“ಪೋಲಿಸ್ ಎಂದಿಗೂ ವಿಡಿಯೋ ಕಾಲ್ ಮೂಲಕ ಹಣ ಕೇಳುವುದಿಲ್ಲ ಅಥವಾ ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ. ಯಾವುದೇ ನಕಲಿ ಆದೇಶ ಪತ್ರಗಳಿಗೆ ಸಾರ್ವಜನಿಕರು ಮರುಳಾಗಬಾರದು. ಅನುಮಾನ ಬಂದರೆ ಕೂಡಲೇ 1930 ಗೆ ಕರೆ ಮಾಡಿ ದೂರು ಸಲ್ಲಿಸಬೇಕು.” ಇಂತಹ ಸೈಬರ್ ವಂಚನೆ ಜಾಲಕ್ಕೆ ಅನೇಕರು ಈಗಾಗಲೇ ಹಣ ಕಳೆದುಕೊಂಡಿದ್ದಾರೆ. ಪೊಲೀಸ್ ಹೆಸರಲ್ಲೇ ವಂಚನೆ ನಡೆಸುತ್ತಿರುವ ಸೈಬರ್ ಖದೀಮರ ವಿರುದ್ಧ ಸಾರ್ವಜನಿಕರು ಹೆಚ್ಚು ಜಾಗ್ರತೆ ವಹಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಡಿಸಿಪಿ ರಾಜಾ ಇಮಾಮ್ ಖಾಸಿಂ ಹೇಳಿದ್ದಾರೆ.



