ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಅಪೌಷ್ಟಿಕತೆ, ಸಮಾಜದ ಮೇಲೆ ಅದರ ಪ್ರಭಾವ ಮತ್ತು ಆರೋಗ್ಯಕರ ಮತ್ತು ಸಮತೋಲಿತ ಆಹಾರದ ಮೌಲ್ಯವನ್ನು ತಿಳಿಸಲು ವಿದ್ಯಾರ್ಥಿಗಳೊಂದಿಗೆ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಸಿಆರ್‌ಪಿ ಸತೀಶ ಬೊಮಲೆ ಅಭಿಪ್ರಾಯಪಟ್ಟರು.
ಗುರುವಾರ ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೌಷ್ಠಿಕಾಂಶದ ಆಹಾರಗಳು ಮತ್ತು ಅವುಗಳ ಪ್ರಯೋಜನಗಳು, ಆಹಾರಗಳ ವೈಜ್ಞಾನಿಕ ಹೆಸರು, ದೈನಂದಿನ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಬಗ್ಗೆ ಹೆಚ್ಚು ಸಕ್ರಿಯ ಜಾಗೃತಿಯನ್ನು ತರಲು ಗಮನಹರಿಸಲಾಗಿದ್ದು ಮಕ್ಕಳ ಆರೋಗ್ಯದ ಕಡೆಗಳ ಗಮನ ಕೊಡುವ ನಿಟ್ಟಿನಲ್ಲಿ ಉತ್ತಮ ಪೌಷ್ಠಿಕ ಆಹಾರ ದೊರೆಯುವಂತೆ ಮಾಡುವದಕ್ಕೆ ಪಾಲಕರ ಗಮನ ಹರಿಸಬೇಕು. ಪೌಷ್ಠಿಕ ಆಹಾರದಿಂದ ಮಕ್ಕಳಲ್ಲಿ ಬುದ್ಧಿಮಟ್ಟವು ಹೆಚ್ಚುವದರಲ್ಲಿ ಸಂಶಯವಿಲ್ಲ. ಈ ನಿಟ್ಟನಲ್ಲಿ ಶಾಲೆಗಳಲ್ಲಿ ಪ್ರಾರಂಭಿಸಲಾಗಿರುವ ಪೋಷಣ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯೋಪಾಧ್ಯಾಯ ಬಿ.ಎಂ. ಕುಂಬಾರ ಮಾತನಾಡಿ, ಮಕ್ಕಳು ಮತ್ತು ಸಮುದಾಯದ ಪೌಷ್ಠಿಕ ಆರೋಗ್ಯವನ್ನು ಸುಧಾರಿಸಲು, ಪೋಶಣ ಅಭಿಯಾನವನ್ನು 2018ರಲ್ಲಿ ಭಾರತದಾದ್ಯಂತ ಪ್ರಾರಂಭಿಸಲಾಯಿತು. ಅಪೌಷ್ಟಿಕತೆಯಿಂದ ಯಾರೂ ಬಳಲಬಾರದು ಎನ್ನುವದು ಈ ಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಆರ್.ಎಮ್. ಶಿರಹಟ್ಟಿ, ಎಚ್.ಡಿ. ನಿಂಗರೆಡ್ಡಿ, ಸ್ವಪ್ನಾ ಕಾಳೆ, ಅಕ್ಷತಾ ಕಾಟಿಗರ, ಲಕ್ಷ್ಮಿ ಹತ್ತಿಕಟ್ಟಿ, ಆರ್.ಕೆ. ಉಪನಾಳ ಹಾಗೂ ಶಾಲೆಯ ಅಡುಗೆ ಸಿಬ್ಬಂದಿಯವರಾದ ರಜೀಯಾ ನಧಾಫ್, ಶಶಿಕಲಾ ರಾಯಭಾಗಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.