ವಿಜಯಸಾಕ್ಷಿ ಸುದ್ದಿ, ಗದಗ: ಆಧುನಿಕ ದಿನಗಳಲ್ಲಿ ಭಾರತ ಸ್ವಾವಲಂಬಿಯಾಗಿ ಆಹಾರ ಭದ್ರತೆ ಪಡೆದಿದೆ. ಅದರ ಜೊತೆಗೆ ಪೌಷ್ಠಿಕ ಭದ್ರತೆ ಸಾಧಿಸಲು ಸಾವಯವ ಕೃಷಿ ಅಗತ್ಯವಾಗಿದೆ ಎಂದು ಧಾರವಾಡದ ಕೃಷಿ ವಿಜ್ಞಾನ ಮಹಾವಿದ್ಯಾಲಯದ ಕುಲಪತಿಗಳಾದ ಡಾ. ಪಿ.ಎಚ್. ಪಾಟೀಲ ನುಡಿದರು.
ಅವರು ಗುರುವಾರ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ 2025ನೇ ಸಾಲಿನ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಕೃಷಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ತೋಂಟದಾರ್ಯ ಜಾತ್ರೆಗೆ ವಿಶಿಷ್ಠ ಇತಿಹಾಸವಿದ್ದು, ಪ್ರತಿ ವರ್ಷ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈ ಬಾರಿ ಕೃಷಿಯ ಉನ್ನತೀಕರಣಕ್ಕೆ ಪೂರಕವಾದ ಹಲವು ಮೌಲಿಕ ಗೋಷ್ಠಿಗಳನ್ನು ಏರ್ಪಡಿಸಿರುವುದು ಶ್ಲಾಘನೀಯ. ಗದಗ ಜಿಲ್ಲೆ ಮಳೆ ಆಧಾರಿತ ಕೃಷಿಯನ್ನು ಅವಲಂಬಿಸಿದ್ದು, ಇಲ್ಲಿ ನಿಸರ್ಗದತ್ತ ಸಂಪನ್ಮೂಲಗಳಾದ ಮಣ್ಣು ಹಾಗೂ ನೀರನ್ನು ಸಂರಕ್ಷಿಸಬೇಕಿದೆ. ಯಾವ ಪ್ರದೇಶದಲ್ಲಿ ಮಣ್ಣು ಹಾಗೂ ನೀರನ್ನು ಸಂರಕ್ಷಿಸುವುದಿಲ್ಲವೋ ಅಲ್ಲಿ ಕೃಷಿ ಸಮೃದ್ಧವಾಗಿರಲು ಸಾಧ್ಯವಿಲ್ಲ ಎಂದರು.
ಹೊಲಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲು ಸರ್ಕಾರ ಅನೇಕ ಅವಕಾಶಗಳನ್ನು ನೀಡಿದ್ದು, ರೈತರು ಸರ್ಕಾರಿ ಯೋಜನೆಗಳ ಲಾಭ ಪಡೆಯಬೇಕಿದೆ. ನಾವು ಆರೋಗ್ಯವನ್ನು ನಿಯಮಿತವಾಗಿ ಪರೀಕ್ಷಿಸಿಕೊಂಡಂತೆ ಜಮೀನಿನ ಮಣ್ಣನ್ನು ಸಹ ಕಾಲಕಾಲಕ್ಕೆ ಪರೀಕ್ಷೆಗೆ ಒಳಪಡಿಸಬೇಕು. ರೈತರು ಮಾರುಕಟ್ಟೆ ಲಾಭಕ್ಕಾಗಿ ಒಂದೇ ರೀತಿಯ ಬೆಳೆ ಬೆಳೆಯದೇ ವೈವಿಧ್ಯಮಯ ಬೆಳೆಗಳನ್ನು ಬೆಳೆದಾಗ ಮಣ್ಣಿನ ಪೋಷಕಾಂಶವನ್ನು ಉಳಿಸಬಹುದು ಎಂದರು.
ಡಾ. ಸುರೇಶ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸುರೇಶ ನಾಡಗೌಡರ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯವು ರೈತರಿಗೆ ಹಾಗೂ ಗ್ರಾಮಗಳ ಉನ್ನತೀಕರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಜಾತ್ರಾ ಸಮಿತಿಯ ಕಾರ್ಯದರ್ಶಿ ಶಿವಪ್ಪ ಕತ್ತಿ ಸ್ವಾಗತಿಸಿದರು. ವೇದಿಕೆ ಮೇಲೆ ಜಾತ್ರಾ ಸಮಿತಿ ಅಧ್ಯಕ್ಷ ಡಾ. ಧನೇಶ ದೇಸಾಯಿ, ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ಸಂತೋಷ ಕೆಂಚಪ್ಪನವರ, ಡಾ. ಎಸ್.ಎಲ್. ಪಾಟೀಲ, ಡಾ. ಗುರುನಾಥಗೌಡ ಓದುಗೌಡ್ರ, ಡಾ. ಯೋಗೇಶ ಅಪ್ಪಾಜಯ್ಯ ಮುಂತಾದವರು ಉಪಸ್ಥಿತರಿದ್ದರು.
ಕೃಷಿ ಅಧಿಕಾರಿ ಡಾ. ತಾರಾಮಣಿ ಜಿ.ಎಚ್ ಆಶಯ ನುಡಿಗಳನ್ನಾಡಿ, ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ಮುಂಗಾರು-ಹಿಂಗಾರು ಕಾಲದ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದ್ದೇವೆ. ಇದಿಷ್ಟೇ ಅಲ್ಲದೇ ಕೃಷಿ ಉಪಕರಣ, ಸಾವಯವ ಗೊಬ್ಬರ, ಕೂರಿಗೆಗಳಂಥ ಸಲಕರಣೆಗಳು ಹೀಗೆ ಎಲ್ಲವೂ ಶೇ.90 ರಿಯಾಯಿತಿ ದರದಲ್ಲಿ ಲಭ್ಯವಿದ್ದು, ನರೇಗಾ ಯೋಜನೆ ಅಡಿಯಲ್ಲಿ `ಕೃಷಿ ಕವಚ್’ ಹೆಸರಲ್ಲಿ ಹೊಲಗಳಿಗೆ ಬದು ನಿರ್ಮಾಣ ಮಾಡಲಾಗುತ್ತಿದೆ. ರೈತರು ಇವುಗಳ ಲಾಭ ಪಡೆಯಬೇಕು ಎಂದರು.