ಹಾಸನ: ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನ ಆರೋಪದ ಸುತ್ತ ರಾಜಕೀಯ ಕಾವು ಹೆಚ್ಚಿರುವ ನಡುವೆಯೇ ಬೇಲೂರು ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್ ಅವರು ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡುವ ಮೂಲಕ ಆರೋಪಗಳಿಗೆ ಉತ್ತರ ನೀಡಲು ಮುಂದಾಗಿದ್ದಾರೆ. ತಾವು ಯಾವುದೇ ಕ್ರಾಸ್ ವೋಟಿಂಗ್ ಮಾಡಿಲ್ಲ ಎಂದು ಘೋಷಿಸಿ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ಸನ್ನಿಧಿಗೆ ತೆರಳಿದ್ದಾರೆ.
ಧರ್ಮಸ್ಥಳಕ್ಕೆ ಹೊರಡುವ ಮೊದಲು ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸುರೇಶ್, ದೇವಾಲಯದ ಬಲಿಕಲ್ಲಿನ ಮೇಲೆ ಆಣೆ ಮಾಡಿ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದರು. ಬಳಿಕ ಕರ್ಪೂರ ಹಚ್ಚಿ ನೂರಾರು ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ಧರ್ಮಸ್ಥಳದತ್ತ ಪ್ರಯಾಣ ಆರಂಭಿಸಿದರು.
ಆರೋಪ ಕೇಳಿಬಂದ ದಿನವೇ ಮಂಜುನಾಥಸ್ವಾಮಿ ಸನ್ನಿಧಿಯಲ್ಲಿ ಆಣೆ-ಪ್ರಮಾಣ ಮಾಡುವುದಾಗಿ ಸುರೇಶ್ ಘೋಷಿಸಿದ್ದರು. ಅದರಂತೆ ಇಂದು ಅವರು ಧರ್ಮಸ್ಥಳದಲ್ಲಿ ದೇವರ ಮುಂದೆ ಪ್ರಮಾಣ ಮಾಡಲಿದ್ದು, ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.



