ವಿಜಯಸಾಕ್ಷಿ ಸುದ್ದಿ, ಧಾರವಾಡ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ನಿರಂತರವಾಗಿ ಆಸ್ಪತ್ರೆ, ಅಂಗಡಿ, ಆಹಾರ ಉಗ್ರಾಣಗಳಿಗೆ ಭೇಟಿ ನೀಡಿ, ಉತ್ತಮ ಗುಣಮಟ್ಟ, ಸ್ವಚ್ಛತೆ ಹೊಂದಿರುವದನ್ನು ಪರಿಶೀಲಿಸಬೇಕೆಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್.ಕೃಷ್ಣ ಹೇಳಿದರು.
ಅವರು ಶುಕ್ರವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಗಂಣದಲ್ಲಿ ಮೇ 6ರಿಂದ 9ರವರೆಗೆ ಜಿಲ್ಲೆಯಲ್ಲಿ ಆಹಾರ ಆಯೋಗ ಕೈಗೊಂಡ ಪ್ರವಾಸದ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿರುವ ಕರ್ನಾಟಕ ಆಹಾರ ನಿಗಮದ ಉಗ್ರಾಣಗಳು ಸುರಕ್ಷಿತವಾಗಿಲ್ಲ. ಸ್ವಚ್ಛತೆ, ತಾಂತ್ರಿಕತೆ ಕೊರತೆ ಇದೆ. ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕು. ಧಾರವಾಡ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದಾಗ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ನಿರ್ದೇಶನದ ಮೇರೆಗೆ ಮಾಡಿರುವ ಸೌಲಭ್ಯಗಳ ದಾಸ್ತಾನು ವಹಿ, ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿದ ವಹಿ, ರೈತರ ಬೇಡಿಕೆ ವಹಿ, ಗಮನಿಸಿ, ಪರಿಶೀಲಿಸಿದಾಗ ಉತ್ತಮ ಮಾಹಿತಿ ಸಂಗ್ರಹವಿದೆ. ಇದೇ ರೀತಿ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಖಲಾತಿ ನಿರ್ವಹಿಸಬೇಕೆಂದು ಆಹಾರ ಆಯೋಗದ ಅಧ್ಯಕ್ಷರು ಪ್ರಶಂಸೆ ವ್ಯಕ್ತಪಡಿಸಿದರು.
ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಜನರಿಗೆ ತಲುಪಬೇಕಾದರೆ ಅಧಿಕಾರಿ ವರ್ಗದವರು ಸಮರ್ಪಕವಾಗಿ ಕೆಲಸವನ್ನು ನಿರ್ವಹಿಸಬೇಕು. ಅದರ ಬಗ್ಗೆ ಭೇಟಿ ಸಂದರ್ಭದಲ್ಲಿ ನಿರ್ದೇಶನಗಳನ್ನು ನೀಡಿದ್ದೇನೆ. ಅದರ ಜೊತೆಗೆ ಕಂಡುಬಂದ ನ್ಯೂನತೆಗಳನ್ನು ತಕ್ಷಣ ಸ್ಥಳದಲ್ಲಿಯೇ ಸರಿಪಡಿಸಿ, ಮಾರ್ಗದರ್ಶನವನ್ನು ನೀಡಿದ್ದೇವೆ ಎಂದು ಅವರು ಹೇಳಿದರು.
ಪ್ರತಿಯೊಂದು ನ್ಯಾಯ ಬೆಲೆ ಅಂಗಡಿಗಳಲ್ಲಿ ಸಂಬAಧಪಟ್ಟ ಅಧಿಕಾರಿಗಳ, ಜಾಗೃತ ಸಮಿತಿಯ ಸದಸ್ಯರ, ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರ ಹೆಸರು ಮತ್ತು ದೂರವಾಣಿ ಸಂಖ್ಯೆಗಳ ಫಲಕಗಳನ್ನು ಹಾಕಬೇಕು. ಜನರಿಗೆ ಯಾವುದೇ ನ್ಯಾಯ ಬೆಲೆ ಅಂಗಡಿಗಳಲ್ಲಿ ಏನೇ ತೊಂದರೆಯಾದರೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿ, ಅವರು ನಿರ್ಲಕ್ಷ್ಯ ತೋರಿದರೆ ತಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಸ್ವಾಗತಿಸಿದರು. ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ಅವರು ಪತ್ರಿಕಾಗೋಷ್ಠಿ ನಿರ್ವಹಿಸಿದರು. ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಎಂ. ಬ್ಯಾಕೋಡ, ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರುಗಳಾದ ಲಿಂಗರಾಜ ಕೋಟೆ, ಸುಮಂತ ರಾವ್, ಮಾರುತಿ ಎಂ.ದೊಡ್ಡಲಿಂಗಣ್ಣವರ, ರೋಹಿಣಿ ಪ್ರಿಯ, ಕೆ.ಎಸ್. ವಿಜಯಲಕ್ಷ್ಮೀ ವೇದಿಕೆಯಲ್ಲಿದ್ದರು.
ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸದೆ ಇದ್ದಲ್ಲಿ ಸಾರ್ವಜನಿಕರು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಎಚ್. ಕೃಷ್ಣ (ಮೊ.ಸಂ:944466099), ಸದಸ್ಯರುಗಳಾದ ಲಿಂಗರಾಜ ಕೋಟೆ (ಮೊ.ಸಂ:8105612230), ಸುಮಂತ ರಾವ್ (ಮೊ.ಸಂ:9845875109), ಮಾರುತಿ ಎಂ.ದೊಡ್ಡಲಿಂಗಣ್ಣವರ (ಮೊ.ಸಂ:9945037681), ರೋಹಿಣಿ ಪ್ರಿಯ (ಮೊ.ಸಂ:9845342323), ಕೆ.ಎಸ್.ವಿಜಯಲಕ್ಷ್ಮೀ (ಮೊ.ಸಂ:9663961037), ಸುಜಾತಾ ಡಿ. ಹೊಸಮನಿ (ಮೊ.ಸಂ:9448992005) ಇವರಿಗೆ ಸಂಪರ್ಕಿಸಬಹುದು ಎಂದು ಡಾ. ಎಚ್.ಕೃಷ್ಣ ತಿಳಿಸಿದರು.