ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇತ್ತೀಚೆಗೆ ಶಿರಹಟ್ಟಿಯ ಬಿಇಓ ಕಚೇರಿಯಲ್ಲಿ ಲೋಕಾಯುಕ್ತರ ದಾಳಿ, ರೇಷ್ಮೆ ಇಲಾಖೆಯ ಅವಾಂತರ, ಮಧ್ಯವರ್ತಿಗಳಿಂದ ಬೆಳೆ ವಿಮೆಯಲ್ಲಿ ಸಾಕಷ್ಟು ವಿಷಯಗಳು ಚರ್ಚೆಗೆ ಗ್ರಾಸವಾಗುತ್ತಿದ್ದು, ಇದು ಒಳ್ಳೆಯ ಬೆಳೆವಣಿಗೆಯಲ್ಲ. ದಿನದಿಂದ ದಿನಕ್ಕೆ ತಾಲೂಕು ಸೂಕ್ಷ್ಮ ವಲಯವಾಗಿ ಹೊರಹೊಮ್ಮುತ್ತಿದೆ. ಆದ್ದರಿಂದ ಅಧಿಕಾರಿಗಳು ಎಚ್ಚರದಿಂದ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹಾಗೂ ಶಿರಹಟ್ಟಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಎ.ಎ. ಕಂಬಾಳಿಮಠ ಹೇಳಿದರು.
ಅವರು ಮಂಗಳವಾರ ಶಿರಹಟ್ಟಿಯ ತಾ.ಪಂ ಸಾಮರ್ಥ್ಯ ಸೌಧದಲ್ಲಿ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾನು ಶಿರಹಟ್ಟಿ ತಾ.ಪಂ ಆಡಳಿತಾಧಿಕಾರಿಯಾಗಿರುವ ಸಂದರ್ಭದಲ್ಲಿ ತಾಲೂಕಿನಲ್ಲಿ ಇಂತಹ ಬೆಳವಣಿಗೆಗಳು ಆಗುತ್ತಿರುವುದು ವಿಷಾದನೀಯ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಇಂತಹ ಘಟನೆಗಳು ಮರುಕಳಿಸದಂತೆ ಆಯಾ ಇಲಾಖೆಯ ಅನುಷ್ಠಾನಾಧಿಕಾರಿಗಳು ಕೆಲಸ ಮಾಡಬೇಕು. ಪ್ರಗತಿ ಪರಿಶೀಲನೆಯಂತಹ ಸಭೆಗಳಲ್ಲಿ ಭಾಗವಹಿಸುವ ಸಂದರ್ಭದಲ್ಲಿ ತಮ್ಮ ಇಲಾಖೆಯ ಸಂಪೂರ್ಣ ಮಾಹಿತಿಯನ್ನು ಹೊಂದಿರಬೇಕು. ಸಂಪೂರ್ಣ ಮಾಹಿತಿ ತಮಗೆ ಗೊತ್ತೇ ಇಲ್ಲದಿದ್ದರೆ ಸಭೆ ಹೇಗೆ ನಡೆಸಲು ಸಾಧ್ಯ? ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಮಾನ್ಯ ಸಭೆಯಲ್ಲಿ ನಿಮ್ಮ ಇಲಾಖೆಗಳಲ್ಲಿ ಏನು ಕಾಮಗಾರಿಗಳು ಆಗಬೇಕು ಎನ್ನುವ ಬಗ್ಗೆ ಹಾಗೂ ಎಲ್ಲ ಬೇಕು-ಬೇಡಿಕೆಗಳ ಬಗ್ಗೆ ಕೂಲಂಕಷವಾಗಿ ವಿಸ್ತೃತ ಚರ್ಚೆ ಮಾಡಿ ಕ್ರಿಯಾಯೋಜನೆ ಸಿದ್ಧಪಡಿಸಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಲಾಗುತ್ತಿದೆ. ನೀವು ನೀಡಿದ ಕ್ರಿಯಾ ಯೋಜನೆಯನ್ನೇ ಮತ್ತೆ ಮತ್ತೆ ಬದಲಾಯಿಸುತ್ತಿರುವುದು ನಿಮ್ಮಲ್ಲಿ ಸ್ಪಷ್ಟತೆ ಇಲ್ಲವೇ ಎಂಬ ಪ್ರಶ್ನೆ ಮೂಡಿಸುತ್ತದೆ. ನೀವು ತಯಾರಿಸಿ ಅನುಮೋದನೆಗೆ ಸಲ್ಲಿಸಿದ ಕ್ರಿಯಾಯೋಜನೆ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳೇ ಪ್ರಸ್ತಾವನೆ ಮಾಡಬೇಕು ಎಂದರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಆರ್.ವಿ. ದೊಡ್ಡಮನಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಎಸ್ಎಸ್ಎಲ್ಸಿಯಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಅಂಕ ಗಳಿಸುತ್ತಾರಾದರೂ, ಮುಂದೆ ಪಿಯುಸಿಯಲ್ಲಿ ಕಡಿಮೆ ಅಂಕ ಗಳಿಸುತ್ತಿರುವುದು ಸಾಮಾನ್ಯವಾಗಿದ್ದು, ಇದನ್ನು ಹೋಗಲಾಡಿಸುವುದಕ್ಕೆ ಶಾಲಾ-ಕಾಲೇಜುಗಳ ಹಂತದಲ್ಲಿ ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ, ಐಐಟಿ ಜೊತೆಗೆ ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿಯ ಕೆಲಸಗಳ ಬಗ್ಗೆ ಈಗಿನಿಂದಲೇ ಜಾಗೃತಿ ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ನೆರೆ ರಾಜ್ಯಗಳಲ್ಲಿಯಂತೆ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಮುಖ್ಯವಾಹಿನಿಗೆ ಬರುವುದಕ್ಕೆ ಪೂರಕ ವಾತಾವರಣ ನಿರ್ಮಿಸಬೇಕೆಂದು ಬಿಇಓ ಅವರಿಗೆ ಕಂಬಾಳಿಮಠ ಸೂಚಿಸಿದರು.



